ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಬುಧವಾರ ಕರ್ನಾಟಕಕ್ಕೆ ಆಗಮಿಸಿದ್ದು, ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಕಾರ್ಯಕ್ರಮ ನಡೆಸಿದ್ದಾರೆ. ಮಂಡ್ಯಕ್ಕೆ ಬರುತ್ತಿದ್ದಂತೆ ಅದ್ಧೂರಿ ರೋಡ್ ಶೋ ನಡೆಸಿದ ಯುಪಿ ಸಿಎಂ, ಬಳಿಕ ಮಂಡ್ಯದಲ್ಲಿಂದು ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಭಾಷಣ ಆರಂಭಿಸಿದ್ದಾರೆ. `ಸಕ್ಕರೆಯ ನಾಡು ಮಂಡ್ಯದ ಜನತೆಗೆ ನನ್ನ ನಮಸ್ಕಾರಗಳು, ಆದಿಚುಂಚನಗಿರಿ ಮಠಕ್ಕೆ ನನ್ನ ಭಕ್ತಿ ಪೂರ್ವಕ ನಮಸ್ಕಾರಗಳು’ ಎಂದು ವಿನಮ್ರವಾಗಿ ಹೇಳಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಬಾಯಲ್ಲಿ ಕನ್ನಡ ನುಡಿ ಕೇಳಿ ಮಂಡ್ಯದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಯ ಭಾರತ ಜನನಿಯ ತನುಜಾತೆ.. ಜಯಹೇ ಕರ್ನಾಟಕ ಮಾತೆ ಎಂದು ಕುವೆಂಪು ಅವರ ನಾಡಗೀತೆಯನ್ನು ಯೋಗಿ ಹಾಡಿದರು. ಅಲ್ಲದೇ, ಇಲ್ಲಿನ ಅಭ್ಯರ್ಥಿಗಳನ್ನು ನೀವೆಲ್ಲ ಈ ಬಾರಿ ಗೆಲ್ಲಿಸಬೇಕು ಎಂದು ಕನ್ನಡದಲ್ಲೇ ನಾಡಿನ ಜನತೆಗೆ ಮನವಿ ಮಾಡಿದರು.