ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳಾಗುವ ಹೊತ್ತಿಗೆ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಭಿನ್ನಾಭಿಪ್ರಾಯ ತಾರಕಕ್ಕೇರಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಕೆಲವು ಹಿರಿಯ ಸಚಿವರುಗಳ ನಡುವೆ ಅಧಿಕಾರಿಗಳ ಪೋಸ್ಟಿಂಗ್ ವಿಷಯದಲ್ಲಿ ಮುಸುಕಿನ ಗುದ್ದಾಟ ಆರಂಭವಾಗಿದೆ. ತಮ್ಮನ್ನು ವಿಶ್ವಾಸಕ್ಕೆ ಪಡೆಯದೇ ನಮ್ಮ ಇಲಾಖೆಯ ಆಯಕಟ್ಚಿನ ಸ್ಥಳಗಳಿಗೆ ಕೆಲವು ಅಧಿಕಾರಿಗಳನ್ನು ಸಿಎಂ ನಿಯೋಜಿಸಿರುವುದು ಮುನಿಸಿಗೆ ಕಾರಣವಾಗಿದೆ. ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ವಿದೇಶ ಪ್ರವಾಸದಲ್ಲಿದ್ದಾಗ, ಕೆಐಡಿಬಿ ಸಿಇಒ ಹುದ್ದೆಗೆ ಮೈಸೂರು ಮೂಲದ ಸ್ವಜಾತಿಯ ಐಎಎಸ್ ಅಧಿಕಾರಿಯನ್ನು ಸಿಎಂ ವರ್ಗಾಯಿಸಿದ್ದರು. ಆ ಹುದ್ದೆಗೆ ತಮ್ಮ ಬಳಗ ಮತ್ತೊಬ್ಬರನ್ನು ಸಚಿವರು ನಿಯೋಜಿಸಲು ಬಯಸಿದ್ದರು. ತಕ್ಷಣ ಆ ಅಧಿಕಾರಿ ಅಧಿಕಾರ ವಹಿಸಿಕೊಳ್ಳದಂತೆ ಸಚಿವರು ಸೂಚಿಸುವ ಮೂಲಕ ತಕರಾರು ಎತ್ತಿದ್ದಾರೆ. ಸಿಎಂ ಆಪ್ತ ಬಳಗದ ಕೈಚಳಕದಿಂದ ಈ ವಿದ್ಯಮಾನ ನಡೆದಿದೆ ಎಂದು ಸಚಿವ ಪಾಟೀಲ್ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.ಅದೇ ರೀತಿ ಡಿಸಿಎಂ ಡಿಕೆ ಶಿವಕುಮಾರ್ ವ್ಯಾಪ್ತಿಯ ಬಿಡಿಎ ಯ ಹುದ್ದೆಯೊಂದಕ್ಕೆ ಸಚಿವ ಜಮೀರ್ ಶಿಫಾರಸ್ಸಿನಿಂದ ಸಿಎಂ ಅಧಿಕಾರಿಯೊಬ್ಬರನ್ನು ವರ್ಗಾಯಿಸಿದ್ದರು. ತಮ್ಮ ಗಮನಕ್ಕೆ ಬಾರದೇ ಈ ನಿಯೋಜನೆ ನಡೆದಿರುವುದಕ್ಕೆ ಡಿಕೆಶಿ ವಿರೊಧ ವ್ಯಕ್ತಪಡಿಸಿದ್ದು, ಅವರು ವರ್ಗಾವಣೆಯನ್ನು ತಡೆ ಹಿಡಿದಿದ್ದಾರೆ. ಅದೇ ರೀತಿ ನೂತನ ಬೆಂಗಳೂರು ಪೋಲೀಸ್ ಆಯುಕ್ತ ಹುದ್ದೆ ಸೇರಿದಂತೆ ಹಿರಿಯ ಪೋಲೀಸ್ ಅಧಿಕಾರಿಗಳ ವರ್ಗಾವಣೆ, ನಿಯೋಜನೆಯ ವೇಳೆ ಸಿಎಂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಗೃಹ ಸಚಿವ ಡಾ. ಪರಮೇಶ್ವರ್ ಮುನಿಸಿಕೊಂಡಿದ್ದಾರೆ.ಐಪಿಎಸ್ ಅಧಿಕಾರಿಗಳ ವರ್ಗಾವಣೆ ಸಿಎಂ ವಿವೇಚಾನಾಧಿಕಾರ ಆದರೂ, ಇಲಾಖೆಯಲ್ಲಿ ಕೆಲಸ ಮಾಡುವಾಗ ಸಮನ್ವಯತೆ ಕಾರಣಕ್ಕೆ ತಮ್ಮ ಆಪ್ತ ಅಧಿಕಾರಿಗಳನ್ನು ನಿಯೋಜಿಸಲು ಅವಕಾಶ ಇರಬೇಕು ಎಂದು ಪರಮೇಶ್ವರ್ ಬಯಸಿದ್ದಾರೆ. ಹೀಗೇ ಹಲವು ವರ್ಗಾವಣೆ ವಿಚಾರದಲ್ಲಿ ಸಿಎಂ ಆಪ್ತ ಬಳಗದ ಕೈಚಳಕದಿಂದ ಸಿಎಂ ಹಾಗೂ ಕೆಲವು ಸಚಿವರಗಳ ನಡುವೆ ಸಮನ್ವಯತೆ ಇಲ್ಲದಂತಾಗಿದ್ದು, ಭಿನ್ನಾಭಿಪ್ರಾಯಕ್ಕೆ ಎಡೆಮಾಡಿದೆ.ಆರಂಭದಲ್ಲಿಯೇ ತೆರೆ ಎಳೆಯದಿದ್ದರೆ, ಇದು ತಾರಕ್ಕೇರುವ ಸಾಧ್ಯತೆ ಇದೆ ಎಂದು ಕೆಲವು ಸಚಿವರುಗಳು ಗೊಣಗತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಬೆಂಗಳೂರಿಗೆ ಆಗಮಿಸಿದ್ದು, ಬಿಕ್ಕಟ್ಟಿಗೆ ತೇಪೆ ಹಚ್ಚುವ ಕಾರ್ಯಕ್ಕೆ ಕೈ ಹಾಕಿದ್ದಾರೆ ಎನ್ನಲಾಗಿದೆ.