ಯಶವಂತಪುರ ಕ್ಷೇತ್ರದಲ್ಲಿ ಸ್ಥಳೀಯ ಬಿಜೆಪಿ ನಾಯಕರು ಒಳಗೊಳಗೆ ವಿರೋಧಿಸಲು ಎಸ್.ಟಿ.ಸೋಮಶೇಖರ್ ಹಾಗೂ ಅಮಿತ್ ಶಾ ನಡುವಿನ ಬಾಂಧವ್ಯ ಕಾರಣ ಎನ್ನಲಾಗಿದೆ. ಇಬ್ಬರು ಕೂಡ ಸಹಕಾರಿ ಕ್ಷೇತ್ರದಿಂದ ಬಂದವರಾಗಿರುವ ಕಾರಣ ಉತ್ತಮ ಬಾಂಧವ್ಯ ಏರ್ಪಟ್ಟಿದೆ. ಅಮಿತ್ ಶಾ ಜೊತೆ ಸೋಮಶೇಖರ್ ಒನ್ ಟು ಒನ್ ಸಂಪರ್ಕ ರಾಜ್ಯ ಬಿಜೆಪಿಯ ಕೆಲ ನಾಯಕರ ಕಣ್ಣು ಕೆಂಪಾಗಿಸಿತ್ತು. ಅದೇ ಕಾರಣಕ್ಕೆ ಸ್ಥಳಿಯ ಬಿಜೆಪಿ ನಾಯಕರ ಬಂಡಾಯಕ್ಕೆ ಕೆಲವು ನಾಯಕರು ತೆರೆಮರೆಯಲ್ಲಿ ಸಹಕಾರ ಕೊಡುತ್ತಿದ್ದಾರೆ ಎನ್ನಲಾಗಿದೆ. ಇದನ್ನೇ ಶಾಸಕ ಎಸ್.ಟಿ.ಸೋಮಶೇಖರ್ ನೇರವಾಗಿ ಅಮಿತ್ ಶಾ ಬಳಿ ಹೇಳಿಕೊಂಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಸೋಮಶೇಖರ್ ಆತಂಕಕ್ಕೆ ತೆರೆ ಎಳೆಯಲು ಖುದ್ದು ಅಮಿತ್ ಶಾ ಅವರೇ ದೆಹಲಿಗೆ ಬುಲಾವ್ ನೀಡಿದ್ದು ಸೆಪ್ಟೆಂಬರ್ 2ರಂದು ಎಲ್ಲಾ ಗೊಂದಲ ಪರಿಹರಿಸಲಿದ್ದಾರೆ.ಎಸ್.ಟಿ.ಸೋಮಶೇಖರ್‌ಅವರಿಗೆ ದೆಹಲಿಗೆ ಬರುವಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬುಲಾವ್ ಕೊಟ್ಟಿದ್ದು, ನಿರ್ಮಲ್ ಕುಮಾರ್ ಸುರಾನ ಮೂಲಕ ದೆಹಲಿಗೆ ಕರೆತರಲು ಸೂಚಿಸಿದ್ದಾರೆ. ಆಗಸ್ಟ್ 25 ರಂದು ದೆಹಲಿಗೆ ಎಸ್.ಟಿ.ಸೋಮಶೇಖರ್ ಭೇಟಿ ನೀಡಲಿದ್ದಾರೆ.ಮೊದಲು ಬಿ.ಎಲ್ ಸಂತೋಷ್ ಜೊತೆ ಮಾತುಕತೆ. ಬಳಿಕ ಸೆಪ್ಟೆಂಬರ್ ಮೊದಲ ವಾರದಲ್ಲಿ ಜೆಪಿ ನಡ್ಡಾ ಅಥವಾ ಅಮಿತ್ ಶಾ ಭೇಟಿಯಾಗುವ ಸಾಧ್ಯತೆ ಇದೆ. ಉಳಿದ ವಲಸಿಗರ ಜತೆಗೂ ವರಿಷ್ಠರೇ ನೇರ ಮಾತುಕತೆ ನಡೆಸುವ ಸಂಭವ ಇದೆ. ಒಟ್ಟಿನಲ್ಲಿ ಹೈಕಮಾಂಡ್ ಜತೆಗಿನ ಸೋಮಶೇಖರ್ ಭೇಟಿ ಭಾರೀ ಕುತೂಹಲ ಮೂಡಿಸಿದೆ.