ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಇಂದಿಗೆ 1 ವರ್ಷವಾಗಿದೆ. ಈ ಸಂಘರ್ಷದಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಸಾವಿರಾರು ಜನರು ಪ್ರಾಣ ಕಳೆದುಕೊಂಡರೆ, ಅನೇಕರು ನಿರಾಶ್ರಿತರಾಗಿದ್ದಾರೆ. ಈ ಹಿನ್ನೆಲೆ ಉಕ್ರೇನ್‌ನಲ್ಲಿ ದಾಳಿ ಮಾಡುತ್ತಿರುವ ರಷ್ಯಾದ ಸೈನ್ಯವನ್ನು ಹಿಂತೆಗೆದುಕೊಳ್ಳಲು ವಿಶ್ವಸಂಸ್ಥೆ ನಿರ್ಣಯಿಸಿದೆ.ವಿಶ್ವಸಂಸ್ಥೆ ನಡೆಸಿದ ಸದಸ್ಯ ರಾಷ್ಟ್ರಗಳ ಮಹಾ ಸಭೆಯಲ್ಲಿ ತಮ್ಮ ನಿರ್ಣಯವನ್ನು ತಿಳಿಸುವಂತೆ ಮತದಾನ ನಡೆಸಲಾಯಿತು. ವಿಶ್ವಸಂಸ್ಥೆಯ ಉದ್ದೇಶವನ್ನು 141 ರಾಷ್ಟ್ರಗಳು ಬೆಂಬಲಿಸಿದ್ದು, ರಷ್ಯಾ ಸೇರಿದಂತೆ 7 ದೇಶಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಭಾರತ, ಚೀನಾ ಸೇರಿದಂತೆ 32 ದೇಶಗಳು ಮತ ಹಾಕದೇ ತಮ್ಮ ತಟಸ್ಥ ನಿಲುವನ್ನು ತೋರ್ಪಡಿಸಿಕೊಂಡಿದೆ. ಭಾರತ ಉಕ್ರೇನ್‌ನ ಪ್ರಸ್ತುತ ಪರಿಸ್ಥಿತಿಗೆ ಕಳವಳ ವ್ಯಕ್ತಪಡಿಸಿದೆ. ರಷ್ಯಾ ಹಾಗೂ ಉಕ್ರೇನ್ ಆದಷ್ಟು ಬೇಗ ಸಂಘರ್ಷವನ್ನು ಕೊನೆಗೊಳಿಸಿ, ಮಾತುಕತೆ ನಡೆಸುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ತಿಳಿಸಿದೆ. ಇದೇ ವೇಳೆ ಚೀನಾ ಕೂಡಾ ತಟಸ್ಥ ನಿಲುವನ್ನು ತೋರಿದ್ದು, ಶಾಂತಿಯುತವಾಗಿ ಮಾತುಕತೆಯಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ರಷ್ಯಾ ಹಾಗೂ ಉಕ್ರೇನ್‌ಗೆ ಪಾಠ ಹೇಳಲು ಮುಂದಾಗಿದೆ. ಎಲ್ಲಾ ಸಮಸ್ಯೆಗಳಿಗೂ ಅಣ್ವಸ್ತ್ರವೇ ಮುಖ್ಯವಲ್ಲ. ಅಸ್ತ್ರಗಳನ್ನು ಕಳುಹಿಸುವುದರಿಂದ ಶಾಂತಿಯನ್ನು ಕಾಪಾಡಲು ಸಾಧ್ಯವಿಲ್ಲ. ಇದು ಯುದ್ಧಕ್ಕೆ ಇನ್ನಷ್ಟು ಉತ್ತೇಜನ ನೀಡುತ್ತದೆ ಎಂದು ಚೀನಾ ವಿಶ್ವಸಂಸ್ಥೆಗೆ ತಿಳಿಸಿದೆ.