ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರು, ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ನೈಜಬಣ್ಣ ಒಂದು ವಾರದಲ್ಲಿಯೇ ಬಯಲಿಗೆ ಬಂದಿದೆ. ಮೊದಲ ಸಂಪುಟ ಸಭೆಯಲ್ಲಿಯೇ ಗ್ಯಾರಂಟಿಗಳನ್ನು ಜಾರಿಗೆ ತಂದೇ ತರುತ್ತೇವೆ ಎಂದು ಹೇಳಿದ್ದ ಈಗಿನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಈಗ ವರಸೆ ಬದಲಿಸಿ, ಷರತ್ತುಗಳು ಅನ್ವಯ ಆಗುತ್ತವೆ ಎನ್ನುತ್ತಿದ್ದಾರೆ! ಹಾದಿ ಬೀದಿಯಲ್ಲಿ ಹೋಗೋರಿಗೆಲ್ಲಾ ಗ್ಯಾರಂಟಿ ಯೋಜನೆ ಕೊಡಕ್ಕಾಗಲ್ಲ ಎಂಬ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನು ಒಪ್ಪಲಾಗದು. ಮೊದಲು ಭಾಷಣ ಏನು ಮಾಡಿದ್ದರಲ್ಲ, ಅವತ್ತು ಭರವಸೆ ಕೊಡಬೇಕಾದಾಗಾ ನಿಮಗೆ ತಲೆ ಇರಲಿಲ್ಲವಾ. ಈಗ ಮತ ಕೊಟ್ಟವರೆಲ್ಲಾ ಹಾದಿಬೀದಿಯವರು ಆಗಿಬಿಟ್ರಾ.? ಎಂದು ಆಕ್ರೋಶ ವ್ಯಕ್ತಪಡಿಸಿ.ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದರು.ಗ್ಯಾರಂಟಿಗಳ ಭರವಸೆ ನೀಡಿದ್ದೀರಿ. ಜಾರಿ ಮಾಡಿ ಎಂದು ಜನರು ಕೇಳುತ್ತಿದ್ದಾರೆ. ವಿದ್ಯುತ್ ಬಿಲ್ ಕಟ್ಟುತ್ತಿಲ್ಲ, ಬಸ್ ಟಿಕೆಟ್ ಪಡೆಯಲು ನಿರಾಕರಿಸುತ್ತಿದ್ದಾರೆ. ನುಡಿದಂತೆ ನಡೆಯಬೇಕು, ಮಾತು ತಪ್ಪಿದರೆ ಜನರಿಗೆ ಮೋಸ ಮಾಡಿದಂತೆ ಆಗುತ್ತದೆ. ನಾವು ಜನರ ಪರ ನಿಲ್ಲುತ್ತೇವೆ.ನಾನು ಕೊಟ್ಟ ಮಾತು ತಪ್ಪಲ್ಲ, ಮಾತಿಗೆ ತಪ್ಪಿದರೆ ಒಂದು ಕ್ಷಣವೂ ಅಧಿಕಾರದಲ್ಲಿ ಇರಲ್ಲ ಅಂದಿದ್ದಾರೆ ಅವರು. ಕಾದು ನೋಡೋಣ. ನಂತರ ಜನತೆಯ ಜತೆ ಸೇರಿ ಯಾವ ರೀತಿ ಹೋರಾಟ ಮಾಡಬೇಕೋ ಮಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.