ಒಂದೇ ವರ್ಷದಲ್ಲಿ ಈರುಳ್ಳಿ ಬೆಲೆ ಶೇ.500ರಷ್ಟು ಏರಿಕೆ, ಸಾಲದ ಮೇಲೆ ಸಾಲ ಮಾಡಿಕೊಂಡು, ದೇಶವನ್ನೇ ಮಾರಿಕೊಳ್ಳುವ ಸ್ಥಿತಿಯಲ್ಲಿ ಪಾಕಿಸ್ತಾನವಿದೆ.

ಪಾಕಿಸ್ತಾನದ ಆರ್ಥಿಕತೆಯ ಬಗ್ಗೆ ದಿನಕ್ಕೊಂದು ರೀತಿಯ ಸುದ್ದಿಗಳು. ಆಪ್ತ ದೇಶಗಳು ಸಹಾಯಕ್ಕೆ ಬರದೇ ಇದ್ದಲ್ಲಿ ಪಾಕಿಸ್ತಾನ ದಿವಾಳಿಯಾಗುವುದು ಖಚಿತವಾಗಿದೆ. ಸಾಲದ ಮೇಲೆ ಸಾಲ ಮಾಡಿಕೊಂಡು, ದೇಶವನ್ನೇ ಮಾರಿಕೊಳ್ಳುವ ಸ್ಥಿತಿಯಲ್ಲಿ ಪಾಕಿಸ್ತಾನವಿದೆ. ಅದರೆ, ದೇಶದ ರಾಜಕಾರಣಿಗಳು ಮಾತ್ರ ತಮಗೂ ಅದಕ್ಕೂ ಸಂಬಂಧವಿಲ್ಲದಂತೆ ಇದ್ದಾರೆ. ದಿನಬಳಕೆಯ ವಸ್ತುಗಳಲ್ಲಿ ಭಾರಿ ಏರಿಕೆ: 2022ರ ಜನವರಿಯಲ್ಲಿ ಪಾಕಿಸ್ತಾನದಲ್ಲಿ ಒಂದು ಕೆಜಿ ಈರುಳ್ಳಿಗೆ 36 ರೂಪಾಯಿ ಆಗಿದ್ದರೆ, ಈ ವರ್ಷ 220 ರೂಪಾಯಿಗೆ ಏರಿಕೆಯಾಗಿದೆ. ಇನ್ನು ಕಳೆದ ವರ್ಷದ ಇದೇ ಸಮಯದಲ್ಲಿ ಒಂದು ಕೆಜಿ ಚಿಕನ್‌ಗೆ 210 ರೂಪಾಯಿ ಆಗಿತ್ತು. ಈ ಬಾರಿ ಅದು 383 ರೂಪಾಯಿಗೆ ಏರಿದೆ. ಜನವರಿ 2022 ರಲ್ಲಿ ಹಣದುಬ್ಬರವು 13% ದರದಲ್ಲಿ ಏರುತ್ತಿದ್ದರೆ, ಪ್ರಸ್ತುತ ಅದು 25% ದರದಲ್ಲಿ ಹೆಚ್ಚುತ್ತಿದೆ. ವಿದೇಶಿ ವಿನಿಮಯ ಮೀಸಲು 9 ವರ್ಷಗಳಲ್ಲಿಯೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಡಾಲರ್‌ಎದುರು ಪಾಕಿಸ್ತಾನದ ರೂಪಾಯಿಯ ಮೌಲ್ಯ ಸಂಪೂರ್ಣವಾಗಿ ನೆಲಕಚ್ಚಿದೆ. ಪ್ರಸ್ತುತ ಪಾಕಿಸ್ತಾನದ ಮೇಲಿನ ಸಾಲದ ಹೊರೆ ಜಿಡಿಪಿಯ ಶೇ. 78ರಷ್ಟಿದೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ.ಕಳೆದ 9 ತಿಂಗಳಿನಿಂದ ಪಾಕಿಸ್ತಾನದಲ್ಲಿ ರಾಜಕೀಯ ಅಸ್ಥಿರತೆ ಇದೆ. ಇದು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಇನ್ನು ಜೂನ್ 2022 ಮತ್ತು ಸೆಪ್ಟೆಂಬರ್ 2022 ರ ನಡುವೆ, ಪ್ರವಾಹವು ದೇಶದ ಹೆಚ್ಚಿನ ಭಾಗಗಳನ್ನು ಧ್ವಂಸಗೊಳಿಸಿತು. ಇದು 1.5 ಕೋಟಿಗೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ. ಇದರಿಂದ ದೇಶಕ್ಕೆ 12.5 ಬಿಲಿಯನ್ ಡಾಲರ್ ನಷ್ಟವಾಗಿದೆ. ಹೆಚ್ಚುತ್ತಿರುವ ಆರ್ಥಿಕ ಕೊರತೆಯಿಂದ ಪಾಕಿಸ್ತಾನದ ರೂಪಾಯಿ ಮೌಲ್ಯದಲ್ಲಿ ಭಾರಿ ಕುಸಿತವಾಗಿದೆ.ಪಾಕಿಸ್ತಾನವು ತನ್ನ ಹೆಚ್ಚಿನ ಅಗತ್ಯ ವಸ್ತುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತದೆ. ಈ ಕಾರಣದಿಂದಲೇ ಇಲ್ಲಿ ತಾಳೆ ಎಣ್ಣೆ, ಔಷಧಿ, ಆಹಾರ ಪದಾರ್ಥಗಳ ಬೆಲೆಯೂ ಏರಿಕೆಯಾಗಿದೆ.

Leave a Reply

Your email address will not be published. Required fields are marked *