ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ತಾರಕಕ್ಕೇರಿದ್ದು ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರು ಪೊಲೀಸರ ವಶಕ್ಕೆ

ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ತಾರಕಕ್ಕೇರಿದ್ದು, ಮಹಾರಾಷ್ಟ್ರ ನೋಂದಣಿ ಲಾರಿಗಳ ಕಲ್ಲು ತೂರಾಟ ನಡೆಸಿ ನಂಬರ್ ಪ್ಲೇಟ್‌ಕಿತ್ತು ಹಾಕಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಇತ್ತ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಕಲ್ಲು ತೂರಾಟ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೇರಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರನ್ನು ಬೆಳಗಾವಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ವೇಳೆ ಪೊಲೀಸ್ ವಾಹನವೇರಿದ ಕರವೇ ಕಾರ್ಯಕರ್ತರು ರಕ್ತವನ್ನು ಚೆಲ್ಲುತ್ತೇವೆ ನ್ಯಾಯವನ್ನು ಕೇಳುತ್ತೇವೆ. ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ ಹಾಗೂ ಯಾರಪ್ಪಂದ ಏನೈತಿ ಬೆಳಗಾವಿ ನಮ್ದೈತಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಮಾತನಾಡಿ, ಇವತ್ತು ಪೊಲೀಸರು ನಮ್ಮನ್ನ ಅರೆಸ್ಟ್ ಮಾಡಿದ್ದಾರೆ. ಇವತ್ತು ಒಂದಿನ ನಮ್ಮನ್ನು ತಡೆಯಬಹುದು. ಆದರೆ, ಇದು ಒಂದು ದಿನದ ಚಳುವಳಿ ಅಲ್ಲ. ಕರವೇ ಕಾರ್ಯಕರ್ತರನ್ನ ಬಂಧಿಸಿರುವುದನ್ನ ಧಿಕ್ಕರಿಸಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತಿದೆ. ಸರ್ಕಾರ ಇವತ್ತು ಪೊಲೀಸರನ್ನು ಮುಂದಿಟ್ಟುಕೊಂಡು ನಮ್ಮನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಸರ್ಕಾರ ನಮ್ಮ ಚಳುವಳಿ ಹತ್ತಿಕ್ಕಿದರೆ ನಾವು ನಮ್ಮ ಹೋರಾಟ ಇಷ್ಟಕ್ಕೆ ಬಿಡಲ್ಲ. ಸರ್ಕಾರಕ್ಕೆ ತಕ್ಕ ಶಾಸ್ತಿ ಮಾಡುತ್ತೇವೆ. ಜೊತೆಗೆ ಅಧಿವೇಶನದಲ್ಲಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಬಗ್ಗೆ ಕುಳಿತು ಚರ್ಚೆ ಮಾಡುತ್ತೇವೆ ಎಂದರು.

Leave a Reply

Your email address will not be published. Required fields are marked *