ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಕಾಶ್ಮೀರ, ಲಡಾಖ್‌ಬಿಟ್ಟು ಭಾರತದ ನಕ್ಷೆಯನ್ನು ಚಿತ್ರಿಸಿದ ವಿಶ್ವಸಂಸ್ಥೆ: ಹೊಸ ವಿವಾದ ಸೃಷ್ಟಿ

ವಿಶ್ವದ ಜನಸಂಖ್ಯೆ ವಿಚಾರದಲ್ಲೀಗ ಭಾರತವೇ ನಂಬರ್ 1. ಈ ಬಗ್ಗೆ ವಿಶ್ವಸಂಸ್ಥೆ ಮಾಹಿತಿ ನೀಡಿದ್ದು, ಚೀನಾವನ್ನು ನಮ್ಮ ದೇಶ ಹಿಂದಿಕ್ಕಿದೆಯಂತೆ. ಇನ್ನು, ಈ ವಿಚಾರ ಪ್ರಕಟಿಸಲು ಹೋಗಿ ವಿಶ್ವಸಂಸ್ಥೆಯ ಅಂಗಸಂಸ್ಥೆಯೊಂದು ಹೊಸ ವಿವಾದವೊಂದನ್ನು ಹುಟ್ಟುಹಾಕಿದೆ. ನಮ್ಮ ಕೇಂದ್ರಾಡಳಿತ ಪ್ರದೇಶಗಳಾದ ಲಡಾಖ್‌ಹಾಗೂ ಜಮ್ಮು ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕ ಪ್ರದೇಶವೆಂದು ಡ್ಯಾಶ್‌ಬೋರ್ಡ್‌ನಲ್ಲಿ ಈ ಸಂಸ್ಥೆ ತೋರಿಸುತ್ತದೆ.ಹೌದು, ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯು ತನ್ನ ವಿಶ್ವ ಜನಸಂಖ್ಯೆಯ ಡ್ಯಾಶ್‌ಬೋರ್ಡ್‌ನಲ್ಲಿ ಭಾರತದ ನಕ್ಷೆಯನ್ನು ತಪ್ಪಾಗಿ ಚಿತ್ರಿಸಿ ಹೊಸ ವಿವಾದವನ್ನು ಹುಟ್ಟುಹಾಕಿದೆ. ಮತ್ತು ಜನಸಂಖ್ಯೆಯ ವಿಷಯದಲ್ಲಿ ನಮ್ಮ ದೇಶವು ಚೀನಾವನ್ನು ಮೀರಿಸಿದೆ ಎಂದು ತಿಳಿಸಿದೆ. ಈ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಲಡಾಖ್‌ನ ಕೆಲವು ಭಾಗಗಳನ್ನು ಕೈ ಬಿಡಲಾಗಿದೆ. ಆದರೂ, ವಿಶ್ವಸಂಸ್ಥೆಯ ಅಂಗಸಂಸ್ಥೆಯೊಂದು ಭಾರತದ ಭೂಪಟವನ್ನು ತಪ್ಪಾಗಿ ಚಿತ್ರಿಸಿರುವುದು ಇದೇ ಮೊದಲಲ್ಲ. ಈ ಹಿಂದೆ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರತ್ಯೇಕ ಪ್ರದೇಶಗಳಾಗಿ ಶೇಡ್‌ಮಾಡಿರುವ ನಿದರ್ಶನಗಳೂ ಇವೆ.ಕೇಂದ್ರಾಡಳಿತ ಪ್ರದೇಶಗಳನ್ನು ಬೂದು ಬಣ್ಣದಲ್ಲಿ ತೋರಿಸಿದ್ದ ನಕ್ಷೆಯು ಭಾರತದ ಉಳಿದ ಭಾಗಗಳನ್ನು ಮಾತ್ರ ಗಾಢ ನೀಲಿ ಬಣ್ಣದಲ್ಲಿ ತೋರಿಸಿತ್ತು. ಭಾರತ ಮತ್ತು ಚೀನಾ ನಡುವಿನ ವಿವಾದಿತ ಗಡಿ ಪ್ರದೇಶವಾದ ಅಕ್ಸಾಯ್ ಚಿನ್ ಕೂಡ ನೀಲಿ ಪಟ್ಟೆಗಳೊಂದಿಗೆ ಬೂದು ಬಣ್ಣವನ್ನು ಹೊಂದಿತ್ತು.ಇದೇ ರೀತಿ, ವಿಶ್ವಸಂಸ್ಥೆಯ ಅಂಗಸಂಸ್ಥೆ ಸಹ ಹೊಸ ವಿವಾದ ಸೃಷ್ಟಿ ಮಾಡಿದ್ದು, ಈ ವಿಷಯದ ಬಗ್ಗೆ ವಿದೇಶಾಂಗ ಇಲಾಖೆಯ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗಿದೆ.

Leave a Reply

Your email address will not be published. Required fields are marked *