ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಚಿವ ವಿ.ಸೋಮಣ್ಣ ವಿರುದ್ಧ ಪೊಲೀಸ್ ಠಾಣೆಯಲ್ಲಿ ‘ಕೈ’ ನಾಯಕರ ದೂರು

ಚುನಾವಣಾ ಪ್ರಚಾರದ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಗಲಭೆಗಳು ಹಾಗೂ ಘರ್ಷಣೆಗಳು ನಡೆಯಲಿವೆ ಎಂದು ಮತದಾರರನ್ನು ಬೆದರಿಸಿದ್ದಾರೆ. ಬಿಜೆಪಿ ಹತಾಷೆಯಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದೆ. ಇಲ್ಲ ಸಲ್ಲದ ಹೇಳಿಕೆ ನೀಡಿರುವ ಅಮಿತ್ ಶಾ ಅವರನ್ನು ಬಂಧಿಸಬೇಕು ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಒತ್ತಾಯಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿನ ಜನ ಶಾಂತಿ ಪ್ರಿಯರಾಗಿದ್ದಾರೆ. ಆದರೆ ಏ.25 ರಂದು ಅಮಿತ್ ಶಾ ಚುನಾವಣಾ ಪ್ರಚಾರದ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಗಲಭೆ ನಡೆಯಲಿದೆ ಎಂದು ಬೆದರಿಕೆ ಒಡ್ಡುತ್ತಾರೆ. ಸಾಮಾನ್ಯ ಜನ ಈ ಹೇಳಿಕೆ ನೀಡಿದ್ದರೆ ಇಷ್ಟರಲ್ಲೇ ಅವರ ಬಂಧನವಾಗುತ್ತಿತ್ತು. ಶಾ ಹೇಳಿಕೆಗೆ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು. ಚುನಾವಣಾ ಆಯೋಗ, ಶಾ ಅವರಿಗೆ ಪ್ರಚಾರಕ್ಕೆ ಬಾರದಂತೆ ನಿರ್ಬಂಧ ಹೇರಬೇಕು ಎಂದು ದೆಹಲಿ ಚುನಾವಣಾ ಆಯೋಗಕ್ಕೆ ದೂರು ನೀಡಿ ಒತ್ತಾಯಿಸಿದ್ದಾರೆ. ಸಚಿವ ವಿ.ಸೋಮಣ್ಣ ಚಾಮರಾಜನಗರ ಜೆಡಿಎಸ್ ಅಭ್ಯರ್ಥಿಗೆ ಬೆದರಿಕೆ ಹಾಗೂ ಆಮಿಷವೊಡ್ಡಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಹಾಗೂ ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರು ಹರಿಹಾಯ್ದಿದ್ದಾರೆ.

Leave a Reply

Your email address will not be published. Required fields are marked *