ಇತ್ತೀಚೆಗಷ್ಟೇ ಥಾಯ್ಲೆಂಡ್ ಪ್ರವಾಸ ಮುಗಿಸಿ ಬಂದ ದಕ್ಷಿಣ ಕೊರಿಯಾದ ವ್ಯಕ್ತಿಗೆ ನೆಗ್ಲೇರಿಯಾ ಫೌಲೆರಿ ಸೋಂಕು ತಗುಲಿತ್ತು. ವಿಚಿತ್ರ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಮೆದುಳು ತಿನ್ನುವ ಅಮೀಬಾ ಎನ್ನಲಾಗುವ ಈ ಸೋಂಕು ಕೋವಿಡ್ ಹೆಚ್ಚಳದ ಭೀತಿಯ ಬೆನ್ನಲ್ಲೇ ಜನರಲ್ಲಿ ಮತ್ತೆ ಆತಂಕ ಮೂಡಿಸಿದೆ. ನೆಗ್ಲೇರಿಯಾ ಫೌಲೆರಿ ಹೆಸರಿನ ಈ ರೋಗಕ್ಕೆ ದಕ್ಷಿಣ ಕೋರಿಯಾದಲ್ಲಿ ಮೊದಲ ಬಲಿಯಾಗಿದೆ. ಈ ಮಾರಣಾಂತಿಕ ಸೋಂಕಿನ ಲಕ್ಷಣ ಕಂಡುಬಂದ 10 ದಿನಗಳ ನಂತರ 50 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ನೇಗ್ಲೇರಿಯಾ ಫೌಲೆರಿ ಎಂಬುದು ಒಂದು ಬಗೆಯ ಅಮೀಬಾ ರೀತಿಯ ಜೀವಿ. ಇವು ಸಾಮಾನ್ಯವಾಗಿ ಕೊಳಗಳು, ನದಿಗಳು, ಕೆರೆಗಳಂತಹ ನೀರಿನ ಪ್ರದೇಶ ಹಾಗೂ ಮಣ್ಣಿನಲ್ಲಿಯೂ ಕಂಡುಬರುತ್ತವೆ.ಈ ಜೀವಿಗಳಿರುವ ನೀರು ಮನುಷ್ಯನ ಮೂಗಿನಲ್ಲಿ ಸೇರಿಕೊಂಡರೆ, ಆತ ಸೋಂಕಿಗೆ ಒಳಗಾಗುತ್ತಾನೆ. ಇದು ಮೂಗಿನ ಮೂಲಕ ಮೆದುಳನ್ನು ಪ್ರವೇಶ ಮಾಡಿ, ಮೆದುಳಿಗೆ ಹಾನಿಮಾಡಲು ಪ್ರಾರಂಭಿಸುತ್ತದೆ. ಇದು ಮೆದುಳಿನ ಅಂಗಾಂಶಗಳನ್ನು ನಾಶಪಡಿಸುವುದರಿಂದ ಇದಕ್ಕೆ ಮೆದುಳು ತಿನ್ನುವ ಅಮೀಬಾ ಎಂದು ಕರೆಯಲಾಗುತ್ತದೆ.