ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹತ್ಯೆಗೆ ಬಿಜೆಪಿ ಅಭ್ಯರ್ಥಿ ಸಂಚು ರೂಪಿಸಿದ್ದಾರೆ ಎಂದು ಕಾಂಗ್ರೆಸ್ ಆಡಿಯೋ ಬಾಂಬ್‌ಸಿಡಿಸಿದೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಮತ್ತು ಬಿಜೆಪಿ ಕಾರ್ಯಕರ್ತ ರವಿ ಮಧ್ಯೆ ನಡೆದ ಸಂಭಾಷಣೆಯ ಆಡಿಯೋವನ್ನು ಸುರ್ಜೇವಾಲಾ ಬಿಡುಗಡೆ ಮಾಡಿದ್ದಾರೆ. ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ಖರ್ಗೆ ಹೆಂಡತಿ, ಮಕ್ಕಳನ್ನು ಸಾಫ್ ಮಾಡುತ್ತೇನೆ ಎಂಬ ಸಂಭಾಷಣೆಯಿದೆ. ಬಿಜೆಪಿಯವರು ಖರ್ಗೆಯವರ ಕುಟುಂಬಕ್ಕೆ ಹಿಂಸೆ ನೀಡುತ್ತಿದ್ದಾರೆ ಎಂದು ಸುರ್ಜೇವಾಲಾ ಕಿಡಿಕಾರಿದ್ದಾರೆ. ಇದಕ್ಕೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು, ಆಡಿಯೋ ತಿರುಚಲಾಗಿದೆಯೇ ಏನು ಎಂಬುದನ್ನ ನೋಡಬೇಕು. ಆಡಿಯೋ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಮಾಡುತ್ತೆವೆ, ನಂತರ ಮಾತನಾಡುತ್ತೇನೆ. ಶಿವರಾಜ್ ಕುಮಾರ್ ಮೇಲೆ ಬಿಜೆಪಿ ಟ್ರೋಲ್ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಯಾವ ನಟರು ಯಾವ ಪಕ್ಷ ಪರವಾಗಿ ಬೇಕಾದರೂ ಪ್ರಚಾರ ಮಾಡಬಹುದು. ಪ್ರತಾಪ್ ಸಿಂಹ ಮತ್ತು ಶಿವರಾಜ್ ಕುಮಾರ್ ಟೀಕೆ ಅವರಿಗೆ ಬಿಟ್ಟ ವಿಚಾರ. ಶಿವರಾಜ್ ಕುಮಾರ್ ಪ್ರಚಾರದ ಬಗ್ಗೆ ನನಗೇನು ಅಭ್ಯಂತರವಿಲ್ಲ ಎಂದು ಹೇಳಿದರು.