ವ್ಯಾಪಾರ ಮತ್ತು ಕೈಗಾರಿಕಾ ವಿಭಾಗದಲ್ಲಿ ಗೂಗಲ್ ಹಾಗೂ ಆಲ್ಫಾಬೆಟ್ ಸಿಇಒ ಆಗಿರುವ ಸುಂದರ್ ಪಿಚೈ ಅವರಿಗೆ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಶಸ್ತಿಯನ್ನು ಅಮೆರಿಕ-ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಶುಕ್ರವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪಿಚೈ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಪ್ರಶಸ್ತಿ ಹಸ್ತಾಂತರಿಸಿದರು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪಿಚೈ, ಈ ಅಪಾರ ಗೌರವಕ್ಕಾಗಿ ನಾನು ಭಾರತದ ಜನರಿಗೆ ಕೃತಜ್ಞನಾಗಿದ್ದೇನೆ. ನನ್ನನ್ನು ರೂಪಿಸಿದ ದೇಶದಿಂದಲೇ ಈ ರೀತಿ ಗೌರವಿಸಲ್ಪಟ್ಟಿರುವುದು ನಂಬಲು ಸಾಧ್ಯವೇ ಆಗುತ್ತಿಲ್ಲ. ಭಾರತ ದೇಶ ಎಂದಿಗೂ ನನ್ನ ಭಾಗವಾಗಿರುತ್ತದೆ. ನಾನು ಎಲ್ಲಿಗೇ ಹೋದರೂ ಭಾರತವನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ ಎಂದು ಕೊಂಡಾಡಿದರು.