100 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದ ಅತೀಕ್ ಹಾಗೂ ಆತನ ಸಹೋದರ ಅಶ್ರಫ್ ಅಹ್ಮದ್ ಕಳೆದ 2 ತಿಂಗಳ ಹಿಂದೆ ಹತ್ಯೆಯಾದರು. ಹತ್ಯೆಯಾಗಿದ್ದ ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಅತೀಕ್ ಅಹ್ಮದ್‌ನ ಜಮೀನನ್ನು ಸರ್ಕಾರ ವಶಪಡಿಸಿಕೊಂಡಿತ್ತು.ಪ್ರಯಾಗ್‌ರಾಜ್ ಬಳಿಯ ಲುಕರ್ಗಂಜ್ ಬಳಿ ಸ್ವಾಧೀನಪಡಿಸಿಕೊಂಡ 1731 ಚ.ಮೀ ಭೂಮಿಯಲ್ಲಿ ಸಿಎಂ ಆದಿತ್ಯನಾಥ್ 2021ರ ಡಿಸೆಂಬರ್ 26ರಂದು ವಸತಿಯೋಜನೆಗೆ ಶಂಕು ಸ್ಥಾಪನೆ ಮಾಡಿದ್ದರು. ಬಳಿಕ ಭೂಮಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 2 ಬ್ಲಾಕ್‌ಗಳಲ್ಲಿ 76 ಫ್ಲಾಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಇದೀಗ ಆ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಡವರಿಗೆ ಹಂಚಿದ್ದಾರೆ. ಲಾಟರಿ ಮೂಲಕ ಫ್ಲಾಟ್‌ಗಳನ್ನು ಹಂಚಿಕೆ ಮಾಡಲಾಗಿದೆ. ಶುಕ್ರವಾರ ಆದಿತ್ಯನಾಥ್ ಅವರು 76 ಫ್ಲಾಟ್‌ಗಳ ಕೀಲಿಗಳನ್ನು ಬಡವರಿಗೆ ಹಂಚಿಕೆ ಮಾಡಿದ್ದಾರೆ. ಪ್ರತಿ ಫ್ಲಾಟ್‌ಗಳು 41 ಚ.ಮೀ ವಿಸ್ತೀರ್ಣವನ್ನು ಹೊಂದಿದೆ. ಮನೆಗಳಲ್ಲಿ 2 ಕೊಠಡಿಗಳು, ಅಡುಗೆಮನೆ, ಶೌಚಾಲಯ ಒಳಗೊಂಡಿದೆ. ಈ ಫ್ಲಾಟ್‌ಗಳಿಗಾಗಿ 6,000 ಕ್ಕೂ ಹೆಚ್ಚು ಜನರು ಪ್ರಯಾಗ್‌ರಾಜ್ ಅಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 1,590 ಜನರು ಲಾಟರಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದರು. 2017ಕ್ಕೂ ಮೊದಲು ಬಡವರು ಅಸಹಾಯಕರಾಗಿ ನೋಡುತ್ತಿದ್ದರು. ಇಂದು ನಾವು ಅದೇ ಭೂಮಿಯಲ್ಲಿ ಬಡವರಿಗೆ ಮನೆಗಳನ್ನು ನಿರ್ಮಿಸುತ್ತಿದ್ದೇವೆ. ಈ ಮಾಫಿಯಾಗಳಿಂದ ಭೂಮಿಯನ್ನು ವಶಪಡಿಸಿಕೊಂಡಿರುವುದು ದೊಡ್ಡ ಸಾಧನೆಯಾಗಿದೆ ಎಂದು ಆದಿತ್ಯನಾಥ್ ಸಮಾರಂಭದಲ್ಲಿ ತಿಳಿಸಿದ್ದಾರೆ.