ಬೆಂಗಳೂರು ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ನಿನ್ನೆ ಬಿಜೆಪಿ ಆತ್ಮಾವಲೋಕನ ಸಭೆ ನಡೆಸಿದ್ದು, ಎಲ್ಲ ಜಿಲ್ಲೆಗಳಿಂದ ವರದಿ ತರಿಸಿದ್ದೇವೆ. ಒಂದೊದು ಜಿಲ್ಲೆಗಳಲ್ಲಿ ಒಂದೊಂದು ರೀತಿ ಚುನಾವಣೆ ನಡೆದಿದೆ. ಕೆಲವು ಕಡೆ ಲೋಪದೋಷಗಳಾಗಿದ್ದು, ಸರಿಪಡಿಸಲು ತೀರ್ಮಾನ ಮಾಡಿದ್ದೇವೆ. ಸೋತ ಕ್ಷೇತ್ರಗಳಲ್ಲಿ ಮರು ಸಂಘಟನೆ ಮಾಡಲು ಹಾಗೂ ಲೋಕಸಭೆ ತಯಾರಿ ಬಗ್ಗೆ ತೀರ್ಮಾನ ಮಾಡಿದ್ದೇವೆ. ಬೆಂಗಳೂರಿನಲ್ಲಿ ಮಳೆ ಅನಾಹುತ ಕುರಿತು ಪ್ರತಿಕ್ರಿಯಿಸಿದ ಅವರು, ಕೆಲವೇ ಗಂಟೆಗಳ ಮಳೆಗೆ ಸಾವಾಗಿರೋದು ಬಹಳ ನೋವಿನ ಸಂಗತಿ. ಚಿಕ್ಕಮಗಳೂರಿನಲ್ಲಿ ಮೂರು ಸಾವಾಗಿದೆ. ಬೆಂಗಳೂರಿನಲ್ಲಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಆದರೂ ಬಿಬಿಎಂಪಿಯವರು ಈ ವರ್ಷ ಮುಂಜಾಗ್ರತೆ ಕ್ರಮ ತೆಗೆದುಕೊಂಡಿಲ್ಲ ಅನ್ನೋದು ಸ್ಪಷ್ಟವಾಗ್ತಿದೆ. ಈ ಘಟನೆ ನಡೆಯೋದಿಕ್ಕೆ ಅವಕಾಶ ಕೊಟ್ಟಿದ್ದಾರೆ. ನಾವು ಬೆಂಗಳೂರಿನಲ್ಲಿ ಎಸ್‌ಡಿಆರ್‌ಎಫ್ ತಂಡಗಳನ್ನು ರಚಿಸಿದ್ದೇವೆ. ಈ ತಂಡಗಳಿಗೆ ಚಾಲನೆ ಕೊಟ್ಟು ಕೆಲಸಕ್ಕೆ ಹಚ್ಚುವ ಕೆಲಸ ಆಗಬೇಕು. ಇನ್ನೂ ಐದು ದಿನ ಮಳೆ ಆಗಲಿದೆ. ವ್ಯವಸ್ಥಿತವಾಗಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಗ್ಯಾರಂಟಿಗಳ ಬಗ್ಗೆ ಕಾಂಗ್ರೆಸ್ ಜನರಿಗೆ ಮೋಸ ಮಾಡಿದೆ. ಕಾಂಗ್ರೆಸ್ ಕಾರ್ಯಕರ್ತರು ಜನರ ಬಳಿ ಹೋಗಿ ಸ್ಪಷ್ಟವಾಗಿ ಹೇಳಿಲ್ಲ. ಯಾವುದೋ ಕಂಪನಿಯಿಂದ ಬಂದವರಂತೆ ಹೋಗಿ ಗ್ಯಾರಂಟಿ ಸ್ಕೀಂಗಳ ಬಗ್ಗೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಡಿಸಿ ಆಫೀಸ್ ನಿಂದ ಅಂತಾ ಕರೆ ಮಾಡಿ ಸುಳ್ಳು ಹೇಳಿದ್ದಾರೆ. ಯಾವ ಡಿಸಿ ಆಫೀಸ್ ಅಂದ್ರೆ `ಡಿಸ್ಟ್ರಿಕ್ಟ್ ಕಾಂಗ್ರೆಸ್ ಆಫೀಸ್’ ಅಂತಾ ಹೇಳಿದ್ದಾರೆ. ಈ ರೀತಿ ಜನರಿಗೆ ಮೋಸ ಮಾಡಿದ್ದು, ಮುಂದೆ ಎಲ್ಲವೂ ಬೆಳಕಿಗೆ ಬರಲಿದೆ. ಬಿಜೆಪಿ ಅವಧಿಯ ಹಗರಣಗಳ ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ನಾನು ಸ್ಪಷ್ಟವಾಗಿ ಹೇಳ್ತೀನಿ, ದಯವಿಟ್ಟು ಅವರು ಎಲ್ಲ ತನಿಖೆ ಮಾಡಿಸಲಿ. 40% ಕಮೀಷನ್ ಆರೋಪವನ್ನು ನಮ್ಮ ಮೇಲೆ ಹೊರೆಸಿದ್ದಾರೆ. 40% ಆಗಿದೆ ಅಂತಾ ಅವರು ಪುರಾವೆ ಸಮೇತ ತೋರಿಸಬೇಕು. ಕಾಂಗ್ರೆಸ್ ಸರ್ಕಾರ 40% ಆರೋಪ ಕುರಿತ ಎಲ್ಲ ದಾಖಲೆಗಳನ್ನು ಕೊಡಲಿ, ನಾವು 40% ಕಮೀಷನ್ ತಗೋತಿದ್ವಿ ಅಂತಾ ದಾಖಲೆಸಹಿತ ತೋರಿಸಲಿ ಎಂದು ಸವಾಲ್ ಹಾಕಿದ್ದಾರೆ.