ಮಾಧ್ಯಮಗಳೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಅವರು, ಯಾವುದೇ ಶಾಸಕರೂ ಕೂಡ ಸಚಿವರ ಮೇಲೆ ಆರೋಪ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ಬರೆದಿಲ್ಲ. ಎಲ್ಲ ಕ್ಷೇತ್ರದಲ್ಲಿಯೂ ಶಾಸಕರು, ಸಚಿವರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಇದೆಲ್ಲಾ ಊಹಾಪೋಹ ಆಗಿದೆ. ನಮಗೂ ಸ್ವಲ್ಪ ಕೆಲಸಗಳಿವೆ. ಸಚಿವ ಸಂಪುಟ ಸಭೆ, ಶಾಸಕಾಂಗದ ಸಭೆ ಮಾಡುತ್ತಿದ್ದೇವೆ. ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಲಾಗುತ್ತಿದ್ದು, ಯಾವುದೇ ಭ್ರಷ್ಟಾಚಾರ ಇಲ್ಲದೇ ಯೋಜನೆಗಳು ನಡೆಯುತ್ತವೆಯೇ ಎಂಬ ಬಗ್ಗೆ ಪರಿಶೀಲನೆ ಮಾಡಬೇಕಾಗಿದೆ ಎಂದರು. ಇನ್ನು ಶಾಸಕರು ಭಾರಿ ಆಸೆಯಲ್ಲಿದ್ದಾರೆ. ಕ್ಷೇತ್ರದ ಜನರಿಗೆ ಕೊಟ್ಟ ಮಾತುಗಳನ್ನು ಈಡೇರಿಸಬೇಕು ಎಂದು ಶಾಸಕರು 10 ಕೋಟಿ ರೂ.ಗಳಿಂದ 300 ಕೋಟಿ ರೂ.ವರೆಗೆ ತಮ್ಮ ಕ್ಷೇತ್ರಗಳಿಗೆ ಅನುದಾನ ಕೇಳುತ್ತಿದ್ದಾರೆ. ಆದರೆ, ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಬೇಕಾಗಿದ್ದರಿಂದ ಕೇಳಿದಷ್ಟು ಅನುದಾನ ಕೊಡಲು ಸಾಧ್ಯವಿಲ್ಲ ಅನುದಾನಕ್ಕಾಗಿ ಒಂದು ವರ್ಷ ಕಾಯುವುದು ಅನಿವಾರ್ಯವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ.