ಚೀನಾದಲ್ಲಿ ಕಾಣಿಸಿಕೊಂಡಿರುವ ಕೋವಿಡ್‌ನ ಹೊಸ ರೂಪಾಂತರದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಹೊಸ ತಳಿ ಒಮಿಕ್ರಾನ್ ಸಬ್‌ವೇರಿಯಂಟ್‌ನಿಂದ (BF.7) ಸಾವುಗಳು ಹೆಚ್ಚಾಗುತ್ತಿವೆ ಎಂದು ತಿಳಿದುಬಂದಿರುವ ಹಿನ್ನೆಲೆಯಲ್ಲಿ WHO ಮುಖ್ಯಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಯ ಬಗ್ಗೆ ನಾವು ಚಿಂತಾಕ್ರಾಂತರಾಗಿದ್ದೇವೆ ಎಂದು WHO ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ. ಅತೀ ತ್ವರಿತವಾಗಿ ಜನರಿಗೆ ಲಸಿಕೆ ನೀಡಬೇಕೆಂದು ಚೀನಾ ಆಡಳಿತಕ್ಕೆ ಘೆಬ್ರೆಯೆಸಸ್ ಸೂಚಿಸಿದ್ದಾರೆ.
ರೋಗದ ತೀವ್ರತೆ, ಆಸ್ಪತ್ರೆಯ ದಾಖಲಾತಿಗಳು ಮತ್ತು ತೀವ್ರ ನಿಗಾ ಅಗತ್ಯತೆಗಳ ಬಗ್ಗೆ ವಿವರವಾದ ಮಾಹಿತಿ ನೀಡುವಂತೆ ಅವರು ಚೀನಾ ದೇಶಕ್ಕೆ ಅವರು ಮನವಿ ಮಾಡಿದ್ದಾರೆ. ‘ದೇಶದಾದ್ಯಂತ ಹೆಚ್ಚಿನ ಅಪಾಯದಲ್ಲಿರುವ ಜನರಿಗೆ ಲಸಿಕೆ ಹಾಕುವ ಪ್ರಯತ್ನಗಳು ಜಾರಿಯಲ್ಲಿರಬೇಕು. ಚೀನಾಗೆ ಎಲ್ಲ ರೀತಿಯಿಂದಲೂ ಸಹಾಯ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಸಿದ್ಧವಾಗಿದೆ. ದೇಶದ ಆರೋಗ್ಯ ವ್ಯವಸ್ಥೆಯನ್ನು ರಕ್ಷಿಸಲು ನಾವು ನಮ್ಮ ಬೆಂಬಲವನ್ನು ನೀಡುತ್ತೇವೆ’ ಎಂದು ಅವರು ಹೇಳಿದ್ದಾರೆ