ನಗರದಲ್ಲಿ ಒಂದು ಸಾವಿರಕ್ಕೂ ಹೆಚ್ಚು ನಕಲಿ ವೈದ್ಯರು ಇರೋದಾಗಿ ಐಎಂಎ, ಫನಾ (ಭಾರತೀಯ ಮೆಡಿಕಲ್ ಅಸೋಸಿಯೇಶನ್ ಮತ್ತು ಖಾಸಗಿ ಆಸ್ಪತ್ರೆಗಳ ಒಕ್ಕೂಟ) ಸರ್ವೆಯಲ್ಲಿ ಬಯಲಾಗಿದೆ. ಬೆಂಗಳೂರಿನಲ್ಲಿ ಕಳೆದೆರಡು ದಿನಗಳ ಹಿಂದಷ್ಟೇ ನಕಲಿ ವೈದ್ಯನ ಚಿಕಿತ್ಸೆಯಿಂದಾಗಿ ಹೆಗ್ಗನಹಳ್ಳಿಯ ಜ್ಯೋತಿ ಎಂಬಾಕೆ ಕಾಲು ಕಳೆದುಕೊಂಡು ನರಕಯಾತನೆ ಅನುಭವಿಸಿದ ಬಗ್ಗೆ ವಿಸ್ತೃತ ವರದಿ ಮಾಡಿದ್ದೆವು. ಈ ಘಟನೆ ಮಾಸುವ ಮುನ್ನವೇ ಭಾರತೀಯ ಮೆಡಿಕಲ್ ಅಸೋಸಿಯೇಶನ್ ಮತ್ತು ಖಾಸಗಿ ಆಸ್ಪತ್ರೆಗಳ ಒಕ್ಕೂಟ ಆತಂಕಕಾರಿ ವಿಚಾರ ಬಿಚ್ಚಿಟ್ಟಿದೆ. ನಗರದಾದ್ಯಂತ ಐಎಂಎ ಮತ್ತು ಫನಾ ನಕಲಿ ವೈದ್ಯರ ಬಗ್ಗೆ ಸರ್ವೆ ನಡೆಸ್ತಿದ್ದು, ಅದರಲ್ಲಿ ಸರ್ಟಿಫಿಕೇಟ್ ಇಲ್ಲದೇ, ರಿಜಿಸ್ಟ್ರೇಷನ್ ಮಾಡಿಸಿಕೊಳ್ಳದೇ ವೈದ್ಯ ಪದವಿ, ತರಬೇತಿಯನ್ನೂ ಪಡೆಯದೇ ಕ್ಲಿನಿಕ್‍ಗಳನ್ನು ತೆರೆದು ಜನರಿಗೆ ಚಿಕಿತ್ಸೆ ನೀಡ್ತಿರೋದು ಬೆಳಕಿಗೆ ಬಂದಿದೆ. ಇಂತಹ ನಕಲಿ ವೈದ್ಯರಿಂದ ಚಿಕಿತ್ಸೆ ಪಡೆದು ಅನಾರೋಗ್ಯಕ್ಕೀಡಾಗುತ್ತಿರುವ ರೋಗಿಗಳ ಸಂಖ್ಯೆ ಕೂಡ ಹೆಚ್ಚಾಗ್ತಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಿ ಕೆಪಿಎಂ ಆಕ್ಟ್ ಪ್ರಕಾರ ಕ್ರಮ ಕೈಗೊಳ್ಳಲು ಆಗ್ರಹಿಸ್ತಿದ್ದಾರೆ.