ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಗುತ್ತಿಗೆದಾರರ ಸಂಘಟನೆಯ ಅಧ್ಯಕ್ಷ ಕೆಂಪಣ್ಣ ಅವರು ಬಾಕಿ ಇರುವ ಬಿಲ್‍ಗಳ ವಿಚಾರವಾಗಿ ಸಿಎಂ ಭೇಟಿಯಾಗಿದ್ದೇವೆ. ಮುಖ್ಯಮಂತ್ರಿಗಳು ಬಿಲ್‍ಗಳನ್ನು ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಹಿಂದಿನ ಸರ್ಕಾರದ ಕಮಿಷನ್ ಆರೋಪ ಬಗ್ಗೆ ನಾವು ಈಗ ಚರ್ಚೆ ಮಾಡಿಲ್ಲ . ಬಜೆಟ್ ಅಧಿವೇಶನದ ನಂತರ ಬಾಕಿ ಮೊತ್ತ ಬಿಡುಗಡೆಗೆ ಪರಿಶೀಲಿಸುದಾಗಿ ಸಿಎಂ ಭರವಸೆ ನೀಡಿದ್ದಾರೆ. ಅಲ್ಲದೇ ನಮ್ಮ ಸರ್ಕಾರದ ಅವಧಿಯಲ್ಲಿ ಕಮಿಷನ್ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲಾಗುತ್ತದೆ. ಬಿಜೆಪಿ ಸರ್ಕಾರದ ಆರ್ಥಿಕ ಅಶಿಸ್ತು ಮತ್ತು ಕಮಿಷನ್ ಹಾವಳಿಯಿಂದ ಗುತ್ತಿಗೆದಾರರಿಗೆ ಸಮಸ್ಯೆ ಆಗಿದೆ. ಬಿಜೆಪಿ ಹಳಿ ತಪ್ಪಿಸಿರುವ ಆರ್ಥಿಕತೆಯನ್ನು ಸರಿಯಾಗಿಸಲು ಸ್ವಲ್ಪ ಸಮಯಾವಕಾಶ ಬೇಕು. ಬಜೆಟ್ ಅಧಿವೇಶನದ ನಂತರ ಬಿಬಿಎಂಪಿ ಹಾಗೂ ಆರ್ಥಿಕ ಇಲಾಖೆ ಕಾರ್ಯದರ್ಶಿಗಳ ಸಭೆ ಕರೆದು ಪರಿಶೀಲಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಈ ವೇಳೆ ಬಿಬಿಎಂಪಿಯಲ್ಲಿ 2000 ಕೋಟಿ ರೂ. ಹಾಗೂ ಅಮೃತ ನಗರೋತ್ಥಾನ ಯೋಜನೆಯಡಿ 1500 ಕೋಟಿ ರೂ.ಗಳು ಬಾಕಿ ಇರುವುದಾಗಿ ಅವರು ತಿಳಿಸಿದ್ದಾರೆ.ಕಾಂಗ್ರೆಸ್ ಸರ್ಕಾರದ ಸಚಿವರು ಕಮಿಷನ್ ಫಿಕ್ಸ್ ಮಾಡಿಕೊಂಡಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಇದುವರೆಗೂ ಕಾಂಗ್ರೆಸ್‍ನಲ್ಲಿ ಯಾರೂ ನಮ್ಮ ಬಳಿ ಕಮಿಷನ್ ಕೇಳಿಲ್ಲ. ಯಾರಾದರೂ ಸಚಿವರು, ಶಾಸಕರು ನಮ್ಮ ಬಳಿ ಕಮಿಷನ್ ಕೇಳಿದರೆ ಅದನ್ನು ಸಹ ಬಹಿರಂಗಪಡಿಸ್ತೇವೆ. ಯಾರೇ ಕಮಿಷನ್ ಕೇಳಿದರೂ ಅದನ್ನು ನಾವು ವಿರೋಧಿಸುತ್ತೇವೆ ಎಂದಿದ್ದಾರೆ.