ನಗರದ ತಮ್ಮ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸೋಮವಾರ ಸಂಜೆ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿಕಾರಿಪುರದ ತಮ್ಮ ಮನೆ ಮೇಲೆ ತಪ್ಪು ಗ್ರಹಿಕೆಯಿಂದ ಬಂಜಾರ ಸಮುದಾಯದ ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ. ಮೊದಲಿನಿಂದಲೂ ಶಿಕಾರಿಪುರ ತಾಲೂಕಿನ ಜನರು ಶಾಂತಿಪ್ರಿಯರು. ಇವತ್ತಿನ ಘಟನಾವಳಿಗಳು ಅನಿರೀಕ್ಷಿತವಾಗಿದ್ದು, ಈಗ ಪರಿಸ್ಥಿತಿ ಶಾಂತವಾಗಿದೆ. ಹಾಗಾಗಿ ಘಟನೆ ಸಂಬಂಧ ಯಾರನ್ನೂ ಬಂಧಿಸದಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.ಈ ಘಟನೆಗೆ ಯಾರಾದರೂ ಕುಮ್ಮಕ್ಕು ನೀಡಿದ್ದಾರೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಈ ಸಮಯದಲ್ಲಿ ಹೇಳಲಿಚ್ಛಿಸುವುದಿಲ್ಲ. ನಾನು ಪ್ರತ್ಯಕ್ಷವಾಗಿ ನೋಡದೆ ಕುಮ್ಮಕ್ಕು ನೀಡಿರುವ ಬಗ್ಗೆ ಮಾತನಾಡುವುದಿಲ್ಲ. ಘಟನೆಗೆ ಕಾಂಗ್ರೆಸ್ನಾಯಕರ ಪ್ರಚೋದನೆ ಇದೆ ಎಂಬ ಕೇಂದ್ರ ಸಚಿವ ನಾರಾಯಣಸ್ವಾಮಿ ಅವರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಅವರಿಗೆ ಈ ರೀತಿ ಬೇರೆಯವರ ಮೇಲೆ ಆರೋಪ ಮಾಡದಂತೆ ಹೇಳುತ್ತೇನೆ. ಯಾರ ಕೈವಾಡವೂ ಇದರ ಹಿಂದೆ ಇದ್ದಂತೆ ಕಾಣುತ್ತಿಲ್ಲ. ತಪ್ಪು ಗ್ರಹಿಕೆಯಿಂದ ಘಟನೆ ನಡೆದಿದೆ ಎಂದು ಮತ್ತೆ ಸ್ಪಷ್ಟಪಡಿಸಿದರು.