ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣ ಹೊಸ ವರ್ಷಾಚರಣೆ ಸಲುವಾಗಿ ಕುಟುಂಬ ಸಮೇತ ರಾಮನಗರದ ಕಗ್ಗಲೀಪುರ ಸಮೀಪವಿರುವ ನೆಟ್ಟಗೆರೆ ಬಳಿ ಇರುವ ರೆಸಾರ್ಟ್ಗೆ ಬಂದಿದ್ದ ಪ್ರದೀಪ್ ರಾತ್ರಿ ಪಾರ್ಟಿ ಮಾಡಿ, ಬೆಳಗ್ಗೆ ಶಿರಾಗೆ ಹೋಗಬೇಕು ಎಂದು ಹೇಳಿ ರೆಸಾರ್ಟ್ನಿಂದ ಭಾನುವಾರ ಬೆಳಗ್ಗೆ ಒಬ್ಬರೇ ಬೆಂಗಳೂರಿನಲ್ಲಿನ ತಮ್ಮ ನಿವಾಸಕ್ಕೆ ಹೋಗಿ ಡೆತ್ ನೋಟ್ ಬರೆದಿದ್ದಾರೆ. ಬಳಿಕ ರೆಸಾರ್ಟ್ಗೆ ವಾಪಸ್ ಬರುವಾಗ ಕಾರಿನಲ್ಲೆ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ನಲ್ಲಿ ಕಾರಣ ಉಲ್ಲೇಖಿಸಿರುವ ಪ್ರದೀಪ್, ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ ಬಳಿ ರೆಸಾರ್ಟ್ ತೆರೆಯಲು 5 ಮಂದಿ ನನ್ನ ಬಳಿ ಮಾತನಾಡಿ, ಒಂದೂವರೆ ಕೋಟಿ ರೂ. ಹಣ ಪಡೆದುಕೊಂಡಿದ್ದರು. ನನ್ನನ್ನು ಪಾಲುದಾರನನ್ನಾಗಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ಮನೆ ಮಾರಿದ್ದೆ. ಸಾಕಷ್ಟು ಸಾಲ ಮಾಡಿಕೊಂಡಿದ್ದೆ. ಆದರೆ, ಪಾಲುದಾರಿಕೆ ಹೆಸರಿನಲ್ಲಿ ನನಗೆ ಮೋಸ ಮಾಡಿದ್ದಾರೆ. ಒಟ್ಟು ಎರಡೂವರೆ ಕೋಟಿ ಹಣ ನನಗೆ ಬರಬೇಕು. ಈ ನಡುವೆ ರಾಜಕಾರಣಿಯೊಬ್ಬರು ರಾಜಿ ಮಾಡುವ ಪ್ರಯತ್ನ ಮಾಡಿದ್ದರು. ಆದರೂ ನನಗೆ ಪೂರ್ಣ ಹಣ ನೀಡದೇ ಮೋಸ ಮಾಡಲಾಗಿದೆ. ಈ ಬಗ್ಗೆ ಕೇಳಿದರೆ ಆ ರಾಜಕಾರಣಿಯವರು ಸಹ ನನಗೆ ಸಹಾಯ ಮಾಡಿಲ್ಲ. ಹೀಗಾಗಿ ನನ್ನ ಸಾವಿಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ, ಗೋಪಿ, ರಘುವ ಭಟ್, ಸೋಮಯ್ಯ, ರಮೇಶ್ ರೆಡ್ಡಿ ಹಾಗೂ ಜಯರಾಮ್ ಎಂದು ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇದೀಗ ಮೃತ ಉದ್ಯಮಿ ಪತ್ನಿ ನಮಿತಾ ದೂರಿನನ್ವಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಈ 6 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆರೋಪಿಗಳೆಲ್ಲರಿಗೂ ನೋಟಿಸ್ ನೀಡಿ ಪೊಲೀಸರು ವಿಚಾರಣೆಗೆ ಕರೆಸಿಕೊಳ್ಳುವ ಸಾಧ್ಯತೆಯಿದೆ.