ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನದ ಸಂಕಷ್ಟಗಳು ಸದ್ಯದಲ್ಲಿ ಅಂತ್ಯ ಕಾಣುವ ಹಾಗೆ ಕಾಣುತ್ತಿಲ್ಲ. ಶುಕ್ರವಾರ ಸತತ ಎರಡನೇ ದಿನವೂ ಡಾಲರ್ ಎದುರು ಪಾಕಿಸ್ತಾನದ ರೂಪಾಯಿ 11.17 ರೂಪಾಯಿ ಕುಸಿತ ಕಂಡಿದೆ. ಇದರರ್ಥ ಪಾಕಿಸ್ತಾನವು ಈಗ ವಿದೇಶದಿಂದ ಏನನ್ನಾದರೂ ಆಮದು ಮಾಡಿಕೊಳ್ಳಬೇಕಾದಲ್ಲಿ ಪ್ರತಿ ಡಾಲರ್‌ಗೆ 266 ಪಾಕಿಸ್ತಾನ ರೂಪಾಯಿಯನ್ನು ಪಾವತಿ ಮಾಡಬೇಕಾಗುತ್ತದೆ. ಈ ನಡುವೆ, ಪಾಕಿಸ್ತಾನದ ಸಂಸದರಿಗೆ ಮೀಸಲಾಗಿರುವ ನಿಧಿಯಲ್ಲಿ 30% ರಷ್ಟು ಏರಿಕೆ ಮಾಡಲಾಗಿದೆ. ಬುಧವಾರ ನಡೆದ ಆರ್ಥಿಕ ಸಮನ್ವಯ ಸಮಿತಿ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಾಕಿಸ್ತಾನದ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮನೆ ಮತ್ತು ವಿಶ್ರಾಂತಿ ಗೃಹಗಳ ನಿರ್ವಹಣೆಗೆ ಬರೋಬ್ಬರಿ 100 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.ಪಾಕಿಸ್ತಾನದ ಅಭಿವೃದ್ಧಿಗೆ ಸಂಸದರ ನಿಧಿಗೆ 90 ಸಾವಿರ ಕೋಟಿ: ಇಸಿಸಿ ಸಭೆಯಲ್ಲಿ ಅಲ್ಲಿನ ಸಂಸದರಿಗೆ 90 ಸಾವಿರ ಕೋಟಿ ಪಾಕಿಸ್ತಾನಿ ರೂಪಾಯಿಗಳನ್ನು ಅಭಿವೃದ್ಧಿ ನಿಧಿಯಾಗಿ ನೀಡಲು ನಿರ್ಧರಿಸಲಾಗಿದೆ.