ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ಭಾರತ್ ರಾಷ್ಟ್ರ ಸಮಿತಿ ನಾಯಕಿ ಕೆ ಕವಿತಾ ಅವರಿಗೆ ದೆಹಲಿಯ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯ ಮಾರ್ಚ್ 9ರಂದು ಇಡಿ ಕಚೇರಿಗೆ ಹಾಜರಾಗುವಂತೆ ಸಮನ್ಸ್ ನೀಡಿದೆ. ಇದೀಗ ರದ್ದಾಗಿರುವ ದೆಹಲಿಯ ಮದ್ಯನೀತಿಯಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿರುವುದಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರನ್ ಪಿಳ್ಳೈ ಅವರನ್ನು ಇಡಿ ಸೋಮವಾರ ವಿಚಾರಣೆ ನಡೆಸಿ, ಮಂಗಳವಾರ ಬಂಧಿಸಿತ್ತು. ಪಿಳ್ಳೈ ಮದ್ಯನೀತಿ ಪ್ರಕರಣದಲ್ಲಿ ಆರೋಪಿಯಾಗಿದ್ದು, ಕವಿತಾಗೆ ಕಂಪನಿಯೊಂದರಲ್ಲಿ ಸಹಾಯ ಮಾಡುತ್ತಿದ್ದರು ಎನ್ನಲಾಗಿದೆ. ಇಡಿ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಕೆ ಕವಿತಾ ಅವರನ್ನು ಹೆಸರಿಸಿದೆ. ಅವರು ಮದ್ಯದ ಕಂಪನಿಯಾದ ಇಂಡೋಸ್ಪಿರಿಟ್ಸ್‌ನಲ್ಲಿ ಶೇ.65 ರಷ್ಟು ಪಾಲನ್ನು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.