ಧಗ ಧಗನೆ ಹೊತ್ತಿ ಉರಿಯುತ್ತಿದ್ದ ಮಣಿಪುರ ಹಿಂಸಾಚಾರ ಸಹಜ ಸ್ಥಿತಿಗೆ – – ಸಾವಿನ ಸಂಖ್ಯೆ 54ಕ್ಕೆ ಏರಿಕೆ

ಮಣಿಪುರದಲ್ಲಿ ಹಿಂಸಾಚಾರದ ಪರಿಣಾಮ ಸಾವಿನ ಸಂಖ್ಯೆ 54 ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ದಿನಗಳಿಂದ ಮಣಿಪುರದಲ್ಲಿ ಹಿಂಸಾಚಾರ ಭುಗಿಲ್ಲೆದ್ದಿದ್ದು ಇಂದು ಸಹಜ ಸ್ಥಿತಿಗೆ ಮರುಳಿದೆ. ಹೀಗಾಗಿ ಸಾವು ನೋವುಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಅಪಾರ ಆಸ್ತಿ ಕೂಡ ಹಾನಿಗೊಂಡಿದೆ. ಹೀಗಾಗಿ ಹೆಚ್ಚಿನ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಗುಡ್ಡಗಾಡು ಜಿಲ್ಲೆಯಾದ ಚುರಾಚಂದ್‌ಪುರದಿಂದ ರಾಜಧಾನಿ ಇಂಫಾಲ್‌ವರೆಗೆ ಮಣಿಪುರ ರಾಜ್ಯಾದ್ಯಂತ ಕುಕಿ ಬುಡಕಟ್ಟು ಜನಾಂಗ ಮತ್ತು ಬಹುಸಂಖ್ಯಾತ ಮೇಟಿ ಸಮುದಾಯದ ನಡುವಿನ ಹಿಂಸಾಚಾರ ಭುಗಿಲೆದ್ದಿತ್ತು. ಪರಿಸ್ಥಿತಿ ಕೈಮೀರಿದರೆ, ಕಂಡಲ್ಲಿ ಗುಂಡು ಹಾರಿಸುವಂತೆ ಮಣಿಪುರ ಸರ್ಕಾರ ಆದೇಶಿಸಿದೆ.ಇದಾದ ಬಳಿಕ ಪರಿಸ್ಥಿತಿ ಹಿಡಿತಕ್ಕೆ ಬಂದಿದೆ ಎಂದು ಪೊಲಿಸರು ತಿಳಿಸಿದ್ದಾರೆ.ಶನಿವಾರ ಅಂಗಡಿಗಳು ಹಾಗೂ ಮಾರುಕಟ್ಟೆಗಳು ತೆರೆಯಲ್ಪಟ್ಟಿದ್ದು ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ವಾಹನಗಳ ಸಂಚಾರ ಪ್ರಾರಂಭಗೊಂಡಿದೆ. ಆದರೂ ಹೆಚ್ಚಿನ ಸೇನಾ ಪಡೆಗಳು, ಪೊಲೀಸ್ ಪಡೆಗಳು ಭದ್ರತೆಯ ದೃಷ್ಠಿಯಿಂದ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 54 ಮೃತರಲ್ಲಿ 16 ಶವಗಳನ್ನು ಚುರಾಚಂದ್‍ಪುರ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. 15 ಮೃತದೇಹಗಳನ್ನು ಇಂಪಾಲ ಪೂರ್ವ ಜಿಲ್ಲೆಯ ಜವಾಹರಲಾಲ್ ನೆಹರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಇರಿಸಲಾಗಿದೆ. ಇಂಪಾಲ ಪಶ್ಚಿಮ ಜಿಲ್ಲೆಯ ಲ್ಯಾಂಫೆಲ್‍ನಲ್ಲಿರುವ ರೀಜನಲ್ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ 23 ಮಂದಿ ಶವ ಇರಿಸಲಾಗಿದೆ. ಚುರಾಚಂದ್‍ಪುರ, ಮೋರೆ, ಕಾಕ್ಚಿಂಗ್ ಮತ್ತು ಕಾಂಗ್‍ಪೊಕ್ಪಿ ಜಿಲ್ಲೆಗಳನ್ನು ಸೇನೆಯು ನಿಯಂತ್ರಣಕ್ಕೆ ತಂದಿದ್ದರಿಂದ ಒಟ್ಟು 13,000 ಜನರನ್ನು ರಕ್ಷಿಸಿ. ಅವರನ್ನು ಸುರಕ್ಷಿತ ಆಶ್ರಯಕ್ಕೆ ಸ್ಥಳಾಂತರಿಸಲಾಗಿದೆ. ಗುಂಡೇಟು ತಗುಲಿದ ಅನೇಕ ಜನರು ರಿಮ್ಸ್ ಮತ್ತು ಜವಾಹರಲಾಲ್ ನೆಹರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *