ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಬಕಾರಿ ಸಚಿವ ಸೇಂಥಿಲ್ ಅವರನ್ನು ಬಂಧಿಸುತ್ತಿದ್ದಂತೆಯೇ ಇತ್ತ ಸ್ಟಾಲಿನ್ ವೀಡಿಯೋವೊಂದನ್ನು ಬಿಡುಗಡೆ ಮಾಡಿ ಬಿಜೆಪಿಗೆ ಸವಾಲೆಸೆದಿದ್ದರು. ಡಿಎಂಕೆಯಿಂದ ಪ್ರತಿಯಾಗಿ ಬರುವ ಯಾವುದೇ ರೀತಿಯ ಪ್ರತೀಕಾರವನ್ನು ಬಿಜೆಪಿಗೆ ನಿಭಾಯಿಸಲು ತುಂಬಾ ಕಷ್ಟವಾಗಬಹುದು. ಸೇಡು ತೀರಿಸಿಕೊಳ್ಳಲು ಕೇಂದ್ರದ ಏಜೆನ್ಸಿಗಳನ್ನು ನಿಯೋಜಿಸುವ ಬದಲು ಮುಖಾಮುಖಿ ಬರುವಂತೆ ಸವಾಲು ಹಾಕಿದ್ದರು. ಇದು ಬೆದರಿಕೆಯಲ್ಲ ಬದಲಿಗೆ ಇದು ಎಚ್ಚರಿಕೆ ಎಂದಿದ್ದರು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಲ್ಲಿ ದೇಶವು ಅಘೋಷಿತ ತುರ್ತು ಪರಿಸ್ಥಿತಿಯನ್ನು ಅನುಭವಿಸುತ್ತಿದೆ ಎಂದು ಸ್ಟಾಲಿನ್ ಕಿಡಿಕಾರಿದ್ದರು. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಸಿಎಂ ಎಂ.ಕೆ ಸ್ಟಾಲಿನ್ ವಿರುದ್ಧ ಇದೀಗ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಕಿಡಿಕಾರಿದ್ದಾರೆ. ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ಅಣ್ಣಾಮಲೈ ಸಿಎಂಗೆ ಸವಾಲೊಂದನ್ನು ಎಸೆದಿದ್ದಾರೆ. ಧೈರ್ಯವಿದ್ದರೆ ನಮ್ಮಲ್ಲಿ ಒಬ್ಬರನ್ನು ಟಚ್ ಮಾಡಿ ನೋಡಿ.. ನೆನಪಿರಲಿ ನೀವೇನು ಕೊಟ್ಟಿದ್ದೀರೋ ಅದು ನಿಮಗೆ ವಾಪಸ್ ಆಗುತ್ತದೆ ಎಂಬುದನ್ನು ಮರೆಯಬೇಡಿ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಬೆದರಿಕೆಯ ಹೇಳಿಕೆಗಳನ್ನು ನೀಡುವ ಮೂಲಕ ಸ್ಟಾಲಿನ್ ತಮ್ಮ ಲಿಮಿಟ್ ದಾಟುತ್ತಿದ್ದಾರೆ. ನಿಮ್ಮ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುತ್ತೇವೆ ಎಂದು ನಂಬಿದ್ದೀರಾ..?. ಎಂದು ಅಣ್ಣಾಮಲೈ ವಾಗ್ದಾಳಿ ನಡೆಸಿದ್ದಾರೆ.