ನಮಗೆ ನೀವು ಸಹಕಾರ ನೀಡದೇ ಇದ್ದರೆ ಟ್ವಿಟ್ಟರ್‌ಕಂಪನಿಯನ್ನು ಮುಚ್ಚಿಸುತ್ತೇವೆ, ನಿಮ್ಮ ಉದ್ಯೋಗಿಗಳ ಮನೆಗಳ ಮೇಲೆ ದಾಳಿ ಮಾಡುತ್ತೇವೆ: ಭಾರತ ಸರ್ಕಾರದಿಂದ ಬೆದರಿಕೆ ಬಂದಿತ್ತು ಎಂದ ಡಾರ್ಸಿ

ಯೂಟ್ಯೂಬ್‌ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ವಿಟ್ಟರ್‌ಕಂಪನಿಯ ಮಾಜಿ ಸಿಇಒ ಜಾಕ್‌ಡಾರ್ಸಿ ಅವರು, ಸಂದರ್ಶನದ ಸಮಯದಲ್ಲಿ ವಿದೇಶಿ ಸರ್ಕಾರಗಳಿಂದ ಯಾವುದೇ ಒತ್ತಡವನ್ನು ಎದುರಿಸಿದ್ದೀರಾ ಎಂಬ ಪ್ರಶ್ನೆಗೆ, ಭಾರತದಲ್ಲಿ ನಡೆದ ರೈತರ ಪ್ರತಿಭಟನೆ ವಿಚಾರವನ್ನು ಉಲ್ಲೇಖಿಸಿ ಮೋದಿ ಸರ್ಕಾರದ ವಿರುದ್ಧ ಹಲವು ಆರೋಪಗಳನ್ನು ಡಾರ್ಸಿ ಮಾಡಿದರು. ರೈತರ ಹೋರಾಟದ ಸಮಯದಲ್ಲಿ ಸರ್ಕಾರ ವಿರುದ್ಧ ಟೀಕಿಸುತ್ತಿದ್ದ ಪತ್ರಕರ್ತರ ಖಾತೆಗಳ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ವಿನಂತಿ ಬಂದಿತ್ತು. ಒಂದು ವೇಳೆ ಕ್ರಮ ತೆಗೆದುಕೊಳ್ಳದೇ ಇದ್ದರೆ ನಿಮ್ಮ ಉದ್ಯೋಗಿಗಳ ಮನೆಗಳ ಮೇಲೆ ನಾವು ದಾಳಿ ಮಾಡುತ್ತೇವೆ. ನಮ್ಮ ಆದೇಶಗಳನ್ನು ಪಾಲನೆ ಮಾಡದೇ ಇದ್ದರೆ ನಿಮ್ಮ ಕಚೇರಿಗಳನ್ನು ಮುಚ್ಚುತ್ತೇವೆ ಎಂದು ಎಚ್ಚರಿಕೆ ನೀಡಲಾಗಿತ್ತು. ಡಾರ್ಸಿ ಅವರ ಹೇಳಿಕೆ ಈಗ ವಿಪಕ್ಷಗಳಿಗೆ ಆಹಾರವಾಗಿದ್ದು ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಲು ಆರಂಭಿಸಿವೆ. ಡಾರ್ಸಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ ಟ್ವಿಟರ್‌ನಲ್ಲಿ ಹಂಚಿಕೊಂಡು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *