ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ಮಧ್ಯೆ ಭೀಕರ ಯುದ್ಧ ನಡೆಯುತ್ತಿರುವ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಬುಧವಾರ ಇಸ್ರೇಲ್ಗೆ ಭೇಟಿ ನೀಡಿದ್ದಾರೆ.ಭಾರೀ ಪ್ರಮಾಣದ ಭದ್ರತಾ ಪಡೆಯೊಂದಿಗೆ ವಿಮಾನದಿಂದ ಕೆಳಗಿಳಿದ ಬೈಡೆನ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ಅವರನ್ನು ಅಪ್ಪಿಕೊಂಡರು. ಬಳಿಕ ಗಾಜಾ ಆಸ್ಪತ್ರೆಯ ಮೇಲೆ ನಡೆದ ರಾಕೆಟ್ ದಾಳಿಯ ಕುರಿತು ನೆತನ್ಯಾಹು ಮತ್ತು ಬೈಡೆನ್ ಮಾತುಕತೆ ನಡೆಸಿದ್ದಾರೆ. ಗಾಜಾ ಆಸ್ಪತ್ರೆಯ ಮೇಲೆ ರಾಕೆಟ್ ದಾಳಿ ನಡೆದ ಪರಿಣಾಮ 500 ಮಂದಿ ಸಾವನ್ನಪ್ಪಿದ್ದಾರೆ. ಹಮಾಸ್ ಬಂಡುಕೋರರು ಇದು ಇಸ್ರೇಲ್ ನಡೆಸಿದ ದಾಳಿ ಎಂದು ಹೇಳಿದರೆ, ಇಸ್ರೇಲ್ ಇದು ಹಮಾಸ್ ನಡೆಸಿದ ದಾಳಿ ಎಂದು ವಿಡಿಯೋ ರಿಲೀಸ್ ಮಾಡಿ ತಿರುಗೇಟು ನೀಡಿದೆ. ಈ ಕುರಿತು ಮಾತನಾಡಿದ ಬೈಡೆನ್, ಗಾಜಾದ ಅಲ್-ಅಹ್ಲಿ ಆಸ್ಪತ್ರೆಯಲ್ಲಿ ನಡೆದ ದಾಳಿ ಗಜಾನ್ ಭಯೋತ್ಪಾದಕ ಗುಂಪುಗಳಿಂದ ಸಂಭವಿಸಿದೆ ಎನಿಸುತ್ತಿದೆ. ಈ ದಾಳಿಯನ್ನು ಇಸ್ರೇಲ್ ಮಾಡಿಲ್ಲ. ಗಾಜಾದ ಆಸ್ಪತ್ರೆಯಲ್ಲಿ ನಡೆದ ದಾಳಿಯಿಂದಾಗಿ ನಾನು ತೀವ್ರ ದುಃಖಿತನಾಗಿದ್ದೇನೆ. ಅಲ್ಲದೇ ಆಕ್ರೋಶಗೊಂಡಿದ್ದೇನೆ. ನಾನು ನೋಡಿದ ಆಧಾರದ ಮೇಲೆ ಈ ದಾಳಿಯನ್ನು ಇಸ್ರೇಲ್ ಮಾಡಿಲ್ಲ. ಈ ಕೃತ್ಯವನ್ನು ಬೇರೆ ತಂಡ ಮಾಡಿದೆ ಎಂದಿದ್ದಾರೆ.