ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್‌ನಲ್ಲಿ ಕಾಂಗ್ರೆಸ್‌ಅಭ್ಯರ್ಥಿ ಪರ ಪ್ರಚಾರ ಭಾಷಣ ಮಾಡಿದ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರೊಬ್ಬ ‘ವಿಷದ ಹಾವು’ ನೀವೇನಾದರೂ ವಿಷ ಇದೆಯೋ, ಇಲ್ಲವೋ ಎಂದು ನೆಕ್ಕಲು ಹೋದರೆ ಸತ್ತ ಹಾಗೆ. ಮೋದಿ ಎಲ್ಲವನ್ನೂ ಕೊಟ್ಟಿದ್ದಾರೆ. ಅವರು ಒಳ್ಳೆಯ ಮನುಷ್ಯ. ಏನೋ ಕೊಡುತ್ತಾರೆ ಎಂದು ನೆಕ್ಕಿ ನೋಡಲು ಹೋದರೆ, ನೀವು ಅಲ್ಲೇ ಮಲಗಿ ಬಿಡುತ್ತೀರಿ…ಎಂದು ಕಾಂಗ್ರೆಸ್‌ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಾ ಪ್ರಹಾರ ನಡೆಸಿದ್ದಾರೆ. ಅವರ ಈ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್‌ಹಿರಿಯ ನಾಯಕನ ಮೇಲೆ ಬಿಜೆಪಿ ಮುಗಿಬಿದ್ದು ವಾಗ್ದಾಳಿ ನಡೆಸಿದೆ. ಇದರ ಬೆನ್ನಲ್ಲೇ ರೋಣದಲ್ಲಿ ಸುದ್ದಿಗೋಷ್ಠಿ ನಡೆಸಿ ಉಲ್ಟಾಹೊಡೆದಿರುವ ಖರ್ಗೆ, ನಾನು ವಿಷದ ಹಾವು ಎಂದು ಹೇಳಿದ್ದು ಬಿಜೆಪಿ ಬಗ್ಗೆ. ಮೋದಿ ಅವರನ್ನು ವೈಯಕ್ತಿಕವಾಗಿ ನಿಂದಿಸಿಲ್ಲ. ವ್ಯಕ್ತಿ ಆಧರಿಸಿ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಬಳಿಕ ಇನ್ನೊಮ್ಮೆ ಸ್ಪಷ್ಟನೆ ನೀಡಿರುವ ಅವರು ಯಾರನ್ನೇ ಆಗಲಿ ನೋಯಿಸುವ ಉದ್ದೇಶದಿಂದ ತಾವು ಆ ರೀತಿ ಹೇಳಿಕೆ ನೀಡಿರಲಿಲ್ಲ. ಯಾರಿಗಾದರೂ ನೋವಾಗಿದ್ದರೆ ಖೇದ ವ್ಯಕ್ತಪಡಿಸುತ್ತೇನೆ ವೈಯಕ್ತಿಕವಾಗಿ ಯಾರ ಬಗ್ಗೆಯೂ ನನಗೆ ಅಸೂಯೆ ಇಲ್ಲ ಎಂದು ಸ್ಪಷ್ಟೀಕರಣ ನೀಡಿದರು.