ಹೊಸ ಸಂಸತ್ ಭವನದಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನದಲ್ಲಿ ಪ್ರಧಾನಿ ಮೋದಿ ಮಹಿಳಾ ಮೀಸಲಾತಿ ಮಸೂದೆಯನ್ನು ಪ್ರಕಟಿಸಿದರು. ಅಲ್ಲದೇ ಮಸೂದೆಯನ್ನು ಅಂಗೀಕರಿಸಲು ಮತ್ತು ನಾರಿಶಕ್ತಿ ಪ್ರಾತಿನಿಧ್ಯವನ್ನು ಖಾತ್ರಿಪಡಿಸಿಕೊಳ್ಳಲು ಸಹಾಯ ಮಾಡುವಂತೆ ಎಲ್ಲಾ ಸದಸ್ಯರನ್ನು ಒತ್ತಾಯಿಸಿದರು. ನಾರಿಶಕ್ತಿ ವಂದನ್ ಅಧಿನಿಯಮ್ ಹೆಚ್ಚು ಮಹಿಳೆಯರು ಸಂಸತ್ತು, ಅಸೆಂಬ್ಲಿಗಳ ಸದಸ್ಯರಾಗುವುದನ್ನು ಖಚಿತಪಡಿಸುತ್ತದೆ ಎಂದು ಮೋದಿ ತಿಳಿಸಿದರು. ಈ ವೇಳೆ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ವಾಜಪೇಯಿ ಅವರ ಆಡಳಿತದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಹಲವಾರು ಬಾರಿ ಮಂಡಿಸಲಾಯಿತು. ಆದರೆ ಮಸೂದೆಯನ್ನು ಅಂಗೀಕರಿಸಲು ಸಾಕಷ್ಟು ಬಹುಮತ ಇರದ ಕಾರಣ ಈ ಕನಸು ಅಪೂರ್ಣವಾಯಿತು. ಈ ಹಿಂದೆಯೂ ಸಂಸತ್ ಮಸೂದೆಯನ್ನು ಅಂಗೀಕರಿಸಲು ಪ್ರಯತ್ನಿಸಿದೆ. ವರ್ಷಗಳಿಂದ ಮಹಿಳಾ ಮೀಸಲಾತಿಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದನ್ನು ಮುಂದಕ್ಕೆ ಕೊಂಡೊಯ್ಯಲು ದೇವರು ನನಗೆ ಅವಕಾಶ ನೀಡಿದ್ದಾನೆ. ನಮ್ಮ ಸರ್ಕಾರ ಇಂದು ಉಭಯ ಸದನಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಕುರಿತು ಹೊಸ ಮಸೂದೆಯನ್ನು ತರುತ್ತಿರುವುದಕ್ಕೆ ನಮಗೆ ಸಂತಸವಾಗುತ್ತಿದೆ. ನಾವು ಇತಿಹಾಸವನ್ನು ಸ್ಕ್ರಿಪ್ಟ್ ಮಾಡಿದ್ದೇವೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.