ದೆಹಲಿಯಲ್ಲಿ ವಕೀಲರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ನೀರು ಹಂಚಿಕೆ ವಿವಾದ ಸಂಬಂಧ ಕಾನೂನು ತಜ್ಞರ ಸಭೆ ಮಾಡಲಾಗಿದೆ. ಈವರೆಗೂ ನಾವು ಅಂತಿಮ ನಿರ್ಣಯಕ್ಕೆ ಬಂದಿಲ್ಲ. ಮಹದಾಯಿ, ಕಾವೇರಿ, ಕೃಷ್ಣಾ ನದಿ ನೀರು ಹಂಚಿಕೆ ಮತ್ತು ಮೇಕೆದಾಟು ಯೋಜನೆ ವಿಚಾರವಾಗಿ ಮಾಹಿತಿ ಪಡೆದಿದ್ದೇನೆ. ಉಳಿದ ವಿಚಾರವನ್ನು ಮುಖ್ಯಮಂತ್ರಿಗಳ ಬಳಿ ಚರ್ಚೆ ಮಾಡಲಾಗುತ್ತದೆ. ಬಳಿಕ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಉಳಿದ ನಿರ್ದೇಶನ ನೀಡಲಾಗುವುದು. ನಮಗೆ ಸಮಯ ವ್ಯರ್ಥ ಮಾಡಲು ಇಷ್ಟವಿಲ್ಲ. ಆದಷ್ಟು ಬೇಗ ಎಲ್ಲಾ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ.ಬಿಬಿಎಂಪಿ ಕಾಮಗಾರಿಗಳಲ್ಲಿ ನೈಜತೆ ಪರಿಶೀಲನೆ ಮಾಡಿ ಹಣ ಬಿಡುಗಡೆ ಮಾಡಬೇಕು ಎಂಬ ಸಲಹೆ ಬಂದಿವೆ. ಈ ಬಗ್ಗೆ ತನಿಖೆ ಮಾಡುವಂತೆ ಬಿಜೆಪಿ ಶಾಸಕರೇ ಸಲಹೆ ನೀಡಿದ್ದಾರೆ. ಅವರ ಸಲಹೆ ಗಮನದಲ್ಲಿಟ್ಟುಕೊಂಡು ವಾಸ್ತವ ಅಂಶ ಅರಿಯಲು ವರದಿ ಕೇಳಿದ್ದೇನೆ. ಅನೇಕರು ವರ್ಷಾನುಗಟ್ಟಲೆಯಿಂದ ಬಿಲ್‍ಗಾಗಿ ಕಾಯುತ್ತಿದ್ದಾರೆ. ಯಾರು ಕೆಲಸ ಕೊಟ್ಟಿದ್ದಾರೆ? ಯಾವ ಕೆಲಸ ಆಗಿದೆ, ಅದರ ಗುಣಮಟ್ಟ ಏನಿದೆ? ಎಂದು ಪರಿಶೀಲನೆ ಆಗಬೇಕು. ಈ ವರದಿ ಬಂದ ನಂತರ ವಿವರವಾಗಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.