ಪಕ್ಷದ ವತಿಯಿಂದ ಬಿಡುಗಡೆ ಮಾಡಿರುವ 189 ಅಭ್ಯರ್ಥಿಗಳ ಮೊದಲ ಪಟ್ಟಿಯೇ ಗೆಲುವಿನ ದಿಕ್ಸೂಚಿ: ಬೊಮ್ಮಾಯಿ

ಹೆಚ್‌ಎಎಲ್ ವಿಮಾನ ನಿಲ್ದಾಣದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, 189 ಅಭ್ಯರ್ಥಿಗಳಲ್ಲಿ ಹೊಸ ಮುಖ ತರುವ ನಿಟ್ಟಿನಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಮೊದಲ ಪಟ್ಟಿ ನೋಡಿದರೆ ಈ ಬಾರಿ ಬಿಜೆಪಿ ಮತ್ತೊಮ್ಮೆ ಗೆಲುವು ಸಾಧಿಸುವ ದಿಕ್ಸೂಚಿಯಾಗಿದೆ. ಟಿಕೆಟ್ ಕೈತಪ್ಪಿದವರು ಬಂಡಾಯ ಏಳುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ಕೈತಪ್ಪುವ ಬಗ್ಗೆ ಮೊದಲೇ ಹೇಳಿದ್ದೇವೆ. ಒಟ್ಟು 3 ದಿನ ಚರ್ಚೆ ಮಾಡಿ ಈ ನಿರ್ಧಾರ ಮಾಡಿದ್ದೇವೆ ಎಂದರು. ಇನ್ನೂ 34 ಕ್ಷೇತ್ರಗಳ ಪಟ್ಟಿ ಎರಡು ದಿನಗಳಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ. ನಾವು ಮಾಡಿರುವ ಕೆಲಸಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಮತ ಕೇಳುತ್ತೇವೆ. ಬೂತ್ ಮಟ್ಟದಲ್ಲಿ ತೆರಳಿ, ಹಳ್ಳಿ ಹಳ್ಳಿಗೂ ಹೋಗಿ ಪ್ರಚಾರ ಮಾಡುತ್ತೇವೆ. ರಾಜ್ಯದ ಸಮರ್ಥ ಅಭಿವೃದ್ಧಿ, ಕೋವಿಡ್ ವೇಳೆ ಎದುರಿಸಿದ ಸವಾಲುಗಳು ಹಾಗೂ ಹಲವಾರು ಯುವಕರಿಗೆ ಕೊಟ್ಟ ಕೆಲಸದ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವಿನ ವಿಶ್ವಾಸವಿದೆ ಎಂದು ಹೇಳಿದರು. ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ಕೆಲವು ಸಲಹೆ ಪಡೆಯಲಾಗಿದೆ. ಪಟ್ಟಿ ತಯಾರಿಸುವ ವೇಳೆ ಯಡಿಯೂರಪ್ಪಅಸಮಾಧಾನಗೊಂಡಿದ್ದಾರೆ ಎನ್ನುವುದು ಊಹಾಪೋಹ. ಸಂಪೂರ್ಣವಾಗಿ ಯಡಿಯೂರಪ್ಪ ಅವರು ಈ ಪಟ್ಟಿ ತಯಾರಿಸುವಲ್ಲಿ ಭಾಗಿಯಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದರು

Leave a Reply

Your email address will not be published. Required fields are marked *