ಪ್ರದೀಪ್ ಅವರ ಆತ್ಮಹತ್ಯೆ ದುರದೃಷ್ಟಕರ ಅವರ ಆತ್ಮಹತ್ಯೆಗೆ ಕಾರಣರಾದ ಲಿಂಬಾವಳಿ ಸಹಿತ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ- ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯ

ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪ್ರದೀಪ್ ಮನೆಗೆ ಭೇಟಿ ಬಳಿಕ ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಉದ್ಯಮಿ ಪ್ರದೀಪ್ ಅವರ ಆತ್ಮಹತ್ಯೆ ದುರದೃಷ್ಟಕರ. ಅವರ ಆತ್ಮಹತ್ಯೆಗೆ ಕಾರಣರಾದ ಶಾಸಕ ಅರವಿಂದ ಲಿಂಬಾವಳಿ ಸಹಿತ ಇತರೆ ಎಲ್ಲಾ ಆರೋಪಿಗಳನ್ನು ಈ ಕೂಡಲೇ ಬಂಧಿಸಿ, ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಆದೇಶ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ ಎಂದರು. ಡೆತ್ ನೋಟ್ ನಲ್ಲಿ ಆಡಳಿತದ ಪಕ್ಷದ ಶಾಸಕರ ಹೆಸರಿದೆ ಎಂಬ ಕಾರಣಕ್ಕೆ ಪೊಲೀಸರು ಅಪರಾಧಿಗಳನ್ನು ಬಂಧಿಸದಿದ್ದರೆ ಅವರು ಸಾಕ್ಷ್ಯನಾಶ ಮಾಡುವ ಸಾಧ್ಯತೆಗಳಿರುತ್ತದೆ. ಹೀಗಾದಾಗ ಅನ್ಯಾಯಕ್ಕೊಳಗಾದ ಕುಟುಂಬಕ್ಕೆ ನ್ಯಾಯ ಸಿಗಲು ಸಾಧ್ಯವೇ ಎಂದು ಪ್ರಶ್ನಿಸಿದರು.ಈ ಹಿಂದೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಾಗ ಸೂಕ್ತ ತನಿಖೆ ನಡೆಸದೆ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ. ಈ ಪ್ರಕರಣವು ಅದೇ ರೀತಿ ಆಗುವುದು ಬೇಡ. ತನಿಖೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಹಸ್ತಕ್ಷೇಪ ಮಾಡಬಾರದು. ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದಾಗಿ ಹಲವರು ಅತ್ಮಹತ್ಯೆ ಮಾಡಿಕೊಂಡಿದ್ದಾರೆ, ಇನ್ನು ಕೆಲವರು ದಯಾಮರಣ ಕೋರಿ ಅರ್ಜಿ ಹಾಕಿದ್ದಾರೆ. ಬಿಜೆಪಿಯವರು ನಾಯಕರ ಹಣದಾಸೆಗೆ ಇಂಥಾ ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು ಎಂದು ಮರು ಪ್ರಶ್ನೆ ಮಾಡಿದರು.

Leave a Reply

Your email address will not be published. Required fields are marked *