ಭಾರತವೇ ಕಾತರದಿಂದ ಕಾಯುತ್ತಿರುವ ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ’ಯ (ISRO) ಚಂದ್ರಯಾನ 3 ಮಿಷನ್ ಉಡಾವಣೆಗೆ ಕೌಂಟ್‌ಡೌನ್ ಆರಂಭವಾಗಿದೆ. ಭಾರತವು ತನ್ನ ಮೂರನೇ ಚಂದ್ರನ ಮಿಷನ್ ಅನ್ನು ಜುಲೈ 14ರಂದು ಶುಕ್ರವಾರ ಮಧ್ಯಾಹ್ನ 2:35 ಪ್ರಾರಂಭಿಸಲಿದೆ. ಎಲ್ಲವೂ ಸರಿಯಾಗಿ ನಡೆಯಬೇಕು. ಆಗಸ್ಟ್ 23 ರ ನಂತರ ಯಾವುದೇ ದಿನ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಮೂರು ಹಂತದ ವಿಶೇಷ ಸಾಮರ್ಥ್ಯ ಹೊಂದಿರುವ ಬಾಹ್ಯಾಕಾಶ ನೌಕೆಯು ಚಂದ್ರನ ದಕ್ಷಿಣ ಭಾಗದ ಮೇಲ್ಮೈನಲ್ಲಿ ಸುಸೂತ್ರವಾಗಿ ಲ್ಯಾಂಡ್ ಆಗಲಿದೆ. ಇದನ್ನು ಇಸ್ರೋ ನೇರ ಪ್ರಸಾರ ಮಾಡಲಿದೆ. ಇಸ್ರೋ ವಿಜ್ಞಾನಿಗಳ ತಂಡವು ಪ್ರಾರ್ಥನೆ ಸಲ್ಲಿಸಲು ಚಂದ್ರಯಾನ-3 ರ ಚಿಕಣಿ ಮಾದರಿಯೊಂದಿಗೆ ತಿರುಪತಿ ವೆಂಕಟಾಚಲಪತಿ ದೇವಸ್ಥಾನಕ್ಕೆ ತೆರಳಿದೆ.