ಸುಮಾರು 30 ಮಂದಿಯಿದ್ದ ಪ್ರವಾಸಿ ದೋಣಿಯು ಭಾನುವಾರ ಮಲಪ್ಪುರಂನ ತನೂರಿನ ತೂವಲ್ತೀರಂ ಕಡಲತೀರದ ಸಮೀಪ ಸಂಜೆ 7 ಗಂಟೆ ಸುಮಾರಿಗೆ ಮುಳುಗಡೆಯಾಗಿತ್ತು. ಘಟನೆಯಲ್ಲಿ 22 ಮಂದಿ ಸಾವನ್ನಪ್ಪಿದ್ದು, ಸುಮಾರು 7 ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಪ್ರವಾಸಿ ದೋಣಿ ದುರಂತ ಸಂಬಂಧ ಕೇರಳ ಸರ್ಕಾರವು ಸಂಪೂರ್ಣ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಕೂಡ ಸರ್ಕಾರವೇ ಭರಿಸಲಿದೆ. ಪೊಲೀಸ್ ವಿಶೇಷ ತನಿಖಾ ತಂಡವು ಈ ಸಂಬಂಧ ತನಿಖೆ ನಡೆಸಲಿದೆ ಎಂದು ಸಿಎಂ ಮಾಹಿತಿ ನೀಡಿದೆ.ಇತ್ತ ಘಟನೆಯಲ್ಲಿ ಮೃತಪಟ್ಟ ಕುಟುಂಬಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದು, ಕೇರಳದ ಮಲಪ್ಪುರಂನಲ್ಲಿ ದೋಣಿ ದುರಂತದಿಂದ ಪ್ರಾಣಹಾನಿಯಾಗಿರುವುದು ನೋವು ತಂದಿದೆ. ಪಿಎಂಎನ್‍ಆರ್ ಎಫ್‍ನಿಂದ 2 ಲಕ್ಷ ರೂ.ವನ್ನು ಮೃತರ ಮುಂದಿನ ಸಂಬಂಧಿಕರಿಗೆ ನೀಡಲಾಗುವುದು ಎಂದು ಪ್ರಧಾನಿ ಮೋದಿ ಟ್ವೀಟ್‍ನಲ್ಲಿ ತಿಳಿಸಿದ್ದರು. ಈ ಸಂಬಂಧ ಮಲಪ್ಪುರಂ ಪೊಲೀಸರು ಮಾಧ್ಯಮದ ಜೊತೆ ಮಾತನಾಡಿ, ಹೆಚ್ಚಿನ ಜನ ಹಾಕಿಕೊಂಡು ಹೋಗಿರುವುದೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು, ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ.