ಮಾಜಿ ಸಿಎಂ ಯಡಿಯೂರಪ್ಪ ಆಹ್ವಾನದ ಹಿನ್ನೆಲೆಯಲ್ಲಿ ನಿವಾಸಕ್ಕೆ ಶುಕ್ರವಾರ ಉಪಾಹಾರಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಅಮಿತ್ ಶಾ, ಅಮಿತ್ ಶಾ ಸ್ವಾಗತಿಸಲು ನಿವಾಸದ ಬಾಗಿಲ ಬಳಿಯೇ ಹೂಗುಚ್ಚ ಹಿಡಿದುಕೊಂಡು ಬಿಎಸ್ವೈ ಮತ್ತು ಪುತ್ರ ವಿಜಯೇಂದ್ರ ನಿಂತಿದ್ದರು. ಅಮಿತ್ ಶಾ ಅಲ್ಲಿಗೆ ಆಗಮಿಸಿ, ಕಾರಿನಿಂದ ಇಳಿದೊಡನೆ ಆ ಕ್ಷಣಕ್ಕೆ ಏನೂ ಯೋಚನೆ ಮಾಡಿದ್ದರೋ ಏನೋ. ಇನ್ನೇನು ಶಾಗೆ ಪುಷ್ಪಗುಚ್ಛ ಕೊಡಬೇಕು ಎಂದು ಯಡಿಯೂರಪ್ಪ ಮುಂದೆ ಬಂದಿದ್ದರು. ಆದರೆ ಆಗ ಆ ಹೂಗುಚ್ಛ ವಿಜಯೇಂದ್ರ ಕೈಗೆ ಕೊಡುವಂತೆ ಬಿಎಸ್ವೈಗೆ ಅಮಿತ್ ಶಾ ಸೂಚಿಸಿದರು. ಯಡಿಯೂರಪ್ಪ ಮೊದಲು ಗೊಂದಲವಾದರೂ ಕೂಡಲೇ ಅರ್ಥೈಸಿಕೊಂಡು ವಿಜಯೇಂದ್ರ ಕೈಗೆ ತಮ್ಮ ಕೈಯಲ್ಲಿದ್ದ ಹೂಗುಚ್ಛ ನೀಡಿದರು. ಬಿವೈ ವಿಜಯೇಂದ್ರ ಅವರಿಂದಲೇ ಹೂಗುಚ್ಛ ಪಡೆದು ಬಳಿಕ ತಬ್ಬಿಕೊಂಡು ಬೆನ್ನು ತಟ್ಟಿದ್ದಾರೆ. ಅಮಿತ್ ಶಾ ಅವರ ಈ ನಡೆ ಈಗ ಭಾರೀ ಕುತೂಹಲ ಮತ್ತು ಚರ್ಚೆ ಹುಟ್ಟು ಹಾಕಿದೆ. ಅಮಿತ್ ಶಾ ಹೀಗೇಕೆ ಮಾಡಿದರು? ಇದು ಯಾರಿಗೆ ಸಂದೇಶ? ಮುಂದಿನ ಸಂಭಾವ್ಯ ವಿದ್ಯಮಾನಗಳಿಗೆ ಕೊಟ್ಟ ಸುಳಿವಾ? ಎಂದು ಬಿಜೆಪಿ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.