ವಿವಿಧ ಕಾಮಗಾರಿಗಳು, ಟೆಂಡರ್‌ಗಳನ್ನು ಸ್ಥಗಿತಗೊಳಿಸಿರುವ ಬಗ್ಗೆ ಬಿಜೆಪಿ ನಾಯಕರ ಟೀಕೆ ಕುರಿತು ವಿಕಾಸಸೌಧದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಬಿಜೆಪಿಯವರಿಗೆ ಜೋರಾಗಿ ಟೀಕೆ ಮಾಡಲು ಹೇಳಿ. ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದು ತಿರುಗೇಟು ನೀಡಿದರು. ಸ್ಥಗಿತಗೊಂಡಿರುವ ಕಾಮಗಾರಿ ಪುನರಾರಂಭವಾಗುವುದು ಯಾವಾಗ ಎಂಬ ಮಾಧ್ಯಮದವರ ಪ್ರಶ್ನೆಗೆ, ನಾನು ಎಲ್ಲಾ ಯೋಜನೆ ಡಬಲ್ ಚೆಕ್ ಮಾಡಿಸುತ್ತೇನೆ. ಕಾಮಗಾರಿ ಅಂದಾಜು ಪರಿಶೀಲನೆ ಮಾಡಿಸುತ್ತೇನೆ. ಎಲ್ಲವೂ ಸರಿಯಾಗಿದ್ದರೆ ಮಾತ್ರ ಪುನರಾರಂಭವಾಗಲಿದೆ. ಈ ವಿಚಾರವಾಗಿ ನಾನು ಚುನಾವಣೆಗೂ ಆರು ತಿಂಗಳು ಮುಂಚಿತವಾಗಿ ಎಚ್ಚರಿಕೆ ನೀಡಿದ್ದೆ. ಯಾರು ಎಷ್ಟಾದರೂ ಕೂಗಿಕೊಳ್ಳಲಿ ನಾವು ನಮ್ಮ ನಿರ್ಧಾರಕ್ಕೆ ಬದ್ಧವಾಗಿದ್ದೇವೆ. ಎಲ್ಲಾ ಇಲಾಖೆಗಳಲ್ಲಿ ವರ್ಗಾವಣೆ ದಂಧೆಗೆ ರೇಟ್ ಫಿಕ್ಸ್ ಆಗಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಡ ಮಾಡದೇ ಲೋಕಾಯುಕ್ತಕ್ಕೆ ದೂರು ನೀಡಲಿ ಎಂದು ಮಾಜಿ ಸಿಎಂ ಬೊಮ್ಮಾಯಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಆರ್‌ಆರ್ ನಗರದಲ್ಲಿ ಯಾವುದೇ ಕೆಲಸ ಮಾಡದೇ 123 ಕೋಟಿ ರೂ. ಬಿಲ್ ಪಡೆದಿರುವ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಬಿಡಿಎಯಲ್ಲೂ ಎಸ್‌ಐಟಿ ನಿರ್ಮಾಣ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಪಾಲಿಕೆಯಲ್ಲೂ ಆಗಲಿದೆ. ಈ ಬಗ್ಗೆ ಚರ್ಚೆ ಮಾಡೋಣ ಎಂದು ಡಿಸಿಎಂ ಮಹತ್ವದ ಸುಳಿವೊಂದನ್ನು ನೀಡಿದ್ದಾರೆ.