ಬಿಜೆಪಿ- ಕಾಂಗ್ರೆಸ್ ಸದಸ್ಯರ ನಡುವಿನ ವಾಗ್ವಾದಕ್ಕೆ ಇಡೀ ಸದನ ಬಲಿಯಾಗಿದೆ. ಗದ್ದಲ, ಗಲಾಟೆ, ಪ್ರತಿಭಟನೆ ನಡುವೆ 3 ಬಾರಿ ಕಲಾಪ ಮುಂದೂಡಿಕೆ ಆಗಿದ್ದು, ಮಂಗಳವಾರ ಕಲಾಪ ಪ್ರಾರಂಭವಾದ ಕೂಡಲೇ ಗ್ಯಾರಂಟಿಗಳನ್ನು ಸರಿಯಾಗಿ ಅನುಷ್ಠಾನ ಮಾಡದ ಕುರಿತು ಚರ್ಚೆಗೆ ಅವಕಾಶ ಕೊಡಬೇಕು ಎಂದು ಬಿಜೆಪಿ ಸದಸ್ಯರು ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೊಡುವಂತೆ ಬಿಗಿಪಟ್ಟು ಹಿಡಿದರು. ಇದಕ್ಕೆ ಸಭಾಪತಿ ಸ್ಥಾನದಲ್ಲಿದ್ದ ಉಪ ಸಭಾಪತಿ ಪ್ರಾಣೇಶ್ ಅವರು ಒಪ್ಪಿಗೆ ನೀಡಲಿಲ್ಲ. ಪ್ರಶ್ನೋತ್ತರ ಅವಧಿ ಮತ್ತು ಶೂನ್ಯ ವೇಳೆ ಆದ ಬಳಿಕ ಅವಕಾಶ ಕೊಡುವುದಾಗಿ ತಿಳಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಒಪ್ಪಲಿಲ್ಲ. ಈಗಲೇ ಅವಕಾಶ ಕೊಡುವಂತೆ ಒತ್ತಾಯ ಮಾಡಿದರು. ಈ ವೇಳೆ ಸಚಿವ ಕೃಷ್ಣಭೈರೇಗೌಡ ರೂಲ್ ಬುಕ್ ತೆಗೆದುಕೊಂಡು ನಿಯಮ ಓದಿ ನಿಯಮದ ಪ್ರಕಾರ ಸದನ ನಡೆಸುವಂತೆ ಉಪ ಸಭಾಪತಿಗಳಿಗೆ ಮನವಿ ಮಾಡಿದರು. ಇದಕ್ಕೆ ಒಪ್ಪದ ಬಿಜೆಪಿ ಪ್ರತಿಭಟನೆ ನಡೆಸಿತು. ಕಾಂಗ್ರೆಸ್‌ನಿಂದ ಮೋಸ ಎಂದು ಘೋಷಣೆ ಕೂಗಿದರು. ದೋಖಾ ದೋಖಾ ಕಾಂಗ್ರೆಸ್ ದೋಖಾ ಎಂದು ಘೋಷಣೆ ಕೂಗಿ ಗದ್ದಲ ಮಾಡಿದರು. ಇದಕ್ಕೆ ಆಡಳಿತ ಪಕ್ಷದ ನಾಯಕರು, ವಿಪಕ್ಷ ನಾಯಕನನ್ನು ಆಯ್ಕೆ ಮಾಡದೇ ಇರುವವರು ಪ್ರತಿಭಟನೆ ಮಾಡುತ್ತಾರೆ ಎಂದು ಲೇವಡಿ ಮಾಡಿದರು. ಗದ್ದಲ ಗಲಾಟೆ ಹಿನ್ನೆಲೆಯಲ್ಲಿ ಉಪ ಸಭಾಪತಿಗಳು ಸದನವನ್ನು 30 ನಿಮಿಷ ಮುಂದೂಡಿದರು. ಬಳಿಕ ಸದನ ಪ್ರಾರಂಭವಾದ ನಂತರವೂ ಬಿಜೆಪಿಯ ಪ್ರತಿಭಟನೆ ಮುಂದುವರೆಯಿತು. ಗದ್ದಲ ಗಲಾಟೆ ಹಿನ್ನಲೆಯಲ್ಲಿ ಕಲಾಪವನ್ನು ಮತ್ತೆ 1 ಗಂಟೆಗಳ ಮುಂದೂಡಲಾಯಿತು. ಮತ್ತೆ ಸದನ ಪ್ರಾರಂಭವಾದಾಗ ಬಿಜೆಪಿ ಪ್ರತಿಭಟನೆ ಹೆಚ್ಚಾಯಿತು. ಚರ್ಚೆಗೆ ಅವಕಾಶ ಕೊಡಬೇಕು ಎಂದು ಬಿಜೆಪಿಗರು ಪ್ರತಿಭಟನೆ ಮುಂದುವರಿಸಿದರು. ಇದಕ್ಕೆ ಉಪ ಸಭಾಪತಿ ಮತ್ತು ಸರ್ಕಾರ ಒಪ್ಪಲಿಲ್ಲ. ಹೀಗಾಗಿ ಬಿಜೆಪಿ ಪ್ರತಿಭಟನೆ ಮುಂದುವರಿಸಿತು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಗದ್ದಲ ಗಲಾಟೆ ಹಿನ್ನೆಲೆಯಲ್ಲಿ ಮತ್ತೆ ಸದನವನ್ನು ಉಪ ಸಭಾಪತಿ ಪ್ರಾಣೇಶ್ ಮುಂದೂಡಿದರು.