ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಕಾಯಿಲೆಗೆ ಒಳಗಾಗುತ್ತಿರುವವರ ಸಂಖ್ಯೆ ಅನಿರೀಕ್ಷಿತ ಮಟ್ಟದಲ್ಲಿ ಏರಿಕೆ ಆಗಿರುವುದು ಜನರಲ್ಲಿ ಆತಂಕ ಉಂಟು ಮಾಡಿದೆ. ಬಿಬಿಎಂಪಿ ಆರೋಗ್ಯ ವರದಿಯಲ್ಲಿ ಆಗಸ್ಟ್ ಒಂದೇ ತಿಂಗಳಲ್ಲಿ ಬರೊಬ್ಬರಿ 2,374 ಡೆಂಗ್ಯೂ ಪ್ರಕರಣಗಳು ವರದಿ ಆಗಿದೆ. ವಾರದಿಂದ ವಾರಕ್ಕೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಾ ಬಂದಿದೆ. ಈ ಸಂಬಂಧ ಬಿಬಿಎಂಪಿ ಹೈ ಅಲರ್ಟ್ ಆಗಿದೆ. ನಿಮ್ಮ ಮನೆಗಳ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಮಳೆಗಾಲ ಹಿನ್ನೆಲೆಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ, ಏಕೆಂದರೆ ಡೆಂಗ್ಯೂ ಹರಡುವ ಸೊಳ್ಳೆಗಳು ಇಂತಹ ನಿಂತ ನೀರಿನಲ್ಲಿ ಉತ್ಪತ್ತಿ ಆಗುತ್ತವೆ. ಆದ್ದರಿಂದ ಸದಾ ಜಾಗೃತರಾಗಿರುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜ್ವರ, ಆಯಾಸದಂತೆ ಲಕ್ಷಣಗಳಿಂದ ಸಾಕಷ್ಟು ಮಂದಿ ಆಸ್ಪತ್ರೆಗೆ ಬರುತ್ತಿದ್ದಾರೆ. ತಪಾಸಣೆ ಬಳಿಕ ಅವರಿಗೆ ಡೆಂಗ್ಯೂ ಬಂದಿರುವುದು ಗೊತ್ತಾಗಿದೆ. ಇಂತಹ ಲಕ್ಷಣಗಳು ಬಂದರೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡುವಂತೆ ಬಿಬಿಎಂಪಿ ಕೋರಿದೆ.