ನಗರದ ಶಿವಯೋಗಿ ದೇವಸ್ಥಾನದ ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ಅವರು, ಇನ್ನೂ ವಿಧಾನ ಪರಿಷತ್ ಅವಧಿ 5 ವರ್ಷ 2 ತಿಂಗಳು ಇದ್ದರೂ ಸಹ ಲಕ್ಷ್ಮಣ ಸವದಿ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಎಲ್ಲಾ ಅಧಿಕಾರ ಅನುಭವಿಸಿಯೂ ಶೆಟ್ಟರ್ ಬಿಜೆಪಿ ತೊರೆದಿದ್ದಾರೆ. ಇಲ್ಲಿ ಶೆಟ್ಟರ್ ಅವರನ್ನು ಸೋಲಿಸುವ ಜವಬ್ದಾರಿ ನನ್ನದು, ಲಕ್ಷ್ಮಣ ಸವದಿ ಅವರನ್ನು ಸೋಲಿಸುವ ಜವಾಬ್ದಾರಿ ನಿಮ್ಮದು ಎಂದು ಜನರಿಗೆ ಕರೆ ನೀಡಿದ್ದಾರೆ. 10 ಸಾವಿರ ಜನ ಉರಿ ಬಿಸಿಲಿನಲ್ಲಿ ಸೇರುತ್ತಾರೆ ಎಂದು ನನಗೆ ನಂಬಿಕೆ ಇರಲಿಲ್ಲ. ಇಷ್ಟೊಂದು ಜನ ಸೇರಿದ್ದಾರೆ ಎಂದರೆ ಈ ಬಾರಿ ಚುನಾವಣೆಯಲ್ಲಿ ಸವದಿ ಸೋಲುವುದು ಖಚಿತ. ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ, ರಾಜ್ಯದಲ್ಲಿ ಬಿಜೆಪಿ 130 ಕ್ಕೂ ಹೆಚ್ಚು ಸೀಟು ಪಡೆದು ಸರ್ಕಾರ ರಚಿಸುವುದು ಅಷ್ಟೇ ಸತ್ಯ. 25 ರಿಂದ 30 ಸಾವಿರ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಹೇಶ ಗೆಲ್ಲಲಿದ್ದಾರೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.