ಅಮೆರಿಕದ ರಾಕ್ ಸ್ಪೇಸ್ ಕಂಪನಿಯು ಬೆಳಗಾವಿಯಲ್ಲಿ ತನ್ನ ಕ್ಲೌಡ್ ತಂತ್ರಜ್ಞಾನದ ನಾವೀನ್ಯತಾ ಕೇಂದ್ರವನ್ನು ಸ್ಥಾಪಿಸುವ ಸಂಬಂಧ ಐಟಿ-ಬಿಟಿ ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ Dr. ಅವರೊಂದಿಗೆ ಪೂರ್ವಭಾವಿ ಮಾತುಕತೆ ನಡೆಸಿದೆ. ಈ ವೇಳೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ, ರಾಕ್ ಸ್ಪೇಸ್ ಕಂಪನಿಯು ಬೆಳಗಾವಿಯನ್ನು ಆಯ್ದುಕೊಂಡಿರುವುದು ಸ್ವಾಗತಾರ್ಹ ಕರ್ನಾಟಕವು ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯ ಅತ್ಯುತ್ತಮ ಕಾರ್ಯ ಪರಿಸರ ಹೊಂದಿದೆ. ಇದರ ಜೊತೆಗೆ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಒದಗಿಸಲು ಸೂಕ್ತ ವ್ಯವಸ್ಥೆ ಇದೆ. ರಾಕ್ ಸ್ಪೇಸ್ ಕಂಪನಿಯು ಬೆಳಗಾವಿಯಲ್ಲಿ ನೆಲೆಯೂರಿದರೆ ಅಪಾರ ಬಂಡವಾಳ ಹರಿದು ಬರಲಿದ್ದು, ಸ್ಥಳೀಯ ಪ್ರತಿಭಾವಂತರಿಗೆ ಉದ್ಯೋಗದ ಅವಕಾಶಗಳ ಬಾಗಿಲು ತೆರೆಯಲಿದೆ. ಇದರಿಂದ ಅನಗತ್ಯ ವಲಸೆ ತಪ್ಪಿ, ಪ್ರಾದೇಶಿಕ ಅಸಮತೋಲನ ನಿವಾರಣೆಯೂ ಆಗಲಿದೆ. ಬೆಂಗಳೂರಿನ ಆಚೆಗೂ ಉದ್ಯಮಗಳು ಬರಬೇಕು ಎನ್ನುವುದು ಸರ್ಕಾರದ ನೀತಿಯಾಗಿದೆ ಎಂದರು. ಚರ್ಚೆಯಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಿಇಒ ಸಂಜೀವ್ ಗುಪ್ತ ಭಾಗಿಯಾಗಿದ್ದರು.