ಈ ಬಾರಿಯ ಬಜೆಟ್ ನಲ್ಲಿ ಸರಕಾರವು ಕನ್ನಡ ಸಿನಿಮಾ ರಂಗದ ಹೆಸರಾಂತ ನಟ ಶಂಕರ್ ನಾಗ್ ಹೆಸರಿನಲ್ಲಿ ಯೋಜನೆಯೊಂದನ್ನು ರೂಪಿಸಿದ್ದು, ಅದನ್ನು 2023-24ರಲ್ಲಿ ಸೇರಿಸಲಾಗಿದೆ. ನಗರ ಹಾಗೂ ಪಟ್ಟಣಗಳಲ್ಲಿ ಖಾಲಿ ಇರುವ ಜಾಗಗಳನ್ನು ಗುರುತಿಸಿ, ಖ್ಯಾತ ನಟರಾದ ದಿವಗಂತ ಶಂಕರ್ ನಾಗ್ ಅವರ ಹೆಸರಿನಲ್ಲಿ ಟ್ಯಾಕ್ಸಿ ಹಾಗೂ ಆಟೋ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದೆ. ಈಗಾಗಲೇ ಇರುವ ಬಹುತೇಕ ಆಟೋ ಹಾಗೂ ಟ್ಯಾಕ್ಸಿ ನಿಲ್ದಾಣಗಳಿಗೆ ಶಂಕರ್ ನಾಗ್ ಅವರ ಹೆಸರೇ ಇದೆ. ಇದೀಗ ಬಜೆಟ್ ನಲ್ಲೂ ಇಂಥದ್ದೊಂದು ಯೋಜನೆಯನ್ನು ಘೋಷಿಸಿದ್ದಾರೆ ಸಿಎಂ ಬಸವರಾಜ ಬೊಮ್ಮಾಯಿ. ಬೆಂಗಳೂರಿನಲ್ಲಿ ಮೆಟ್ರೋ ನಿರ್ಮಾಣ ಆಗಬೇಕು ಎನ್ನುವುದು ಶಂಕರ್ ನಾಗ್ ಅವರ ಕನಸಾಗಿತ್ತು. ಅದೀಗ ನನಸಾಗಿದೆ. ನಂದಿಬೆಟ್ಟದಲ್ಲಿ ರೂಪ್‍ವೇ ಕೂಡ ಶಂಕರ್ ಕನಸು. ಇಂತಹ ದೊಡ್ಡ ಯೋಜನೆಗಳಿಗೆ ಶಂಕರ್ ನಾಗ್ ಹೆಸರನ್ನು ಇಡಲಿ ಎನ್ನುವುದು ಅವರ ಅಭಿಮಾನಿಗಳ ಆಗ್ರಹವಾಗಿತ್ತು. ಆದರೆ, ಬಜೆಟ್‍ನಲ್ಲಿ ಇದ್ಯಾವುದೂ ಘೋಷಣೆಯಾಗಲಿಲ್ಲ ಕೊನೆಗೂ ಅದು ಹಾಗೆಯೇ ಉಳಿದುಕೊಂಡಿದೆ.