ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮತಗಳನ್ನು ಡಿಲೀಟ್ ಮಾಡಿರುವ ಪ್ರಕರಣದ ಕುರಿತು ಈಗಾಗಲೇ ಚುನಾವಣಾ ಆಯೋಗ ಗಮನಹರಿಸಿದೆ. ಕೇಂದ್ರ ಚುನಾವಣಾ ಆಯೋಗದ ನೇತೃತ್ವದಲ್ಲಿ ಮತಗಳನ್ನು ಡಿಲೀಟ್ ಮಾಡುವುದು ಹಾಗೂ ಸೇರಿಸುವ ಪ್ರಕ್ರಿಯೆ ಆಗಲಿದೆ. ಬೆಂಗಳೂರ ಇರಬಹುದು, ಹುಬ್ಬಳ್ಳಿಯಲ್ಲಿಯೂ ಇರಬಹುದು. ಅನಧಿಕೃತ ಮತಗಳನ್ನು ತಗೆಯುವ ಕೆಲಸ ಆಗುತ್ತಿದೆ. ಎರಡೆರಡು ಕಡೆಗಳಲ್ಲಿ ವೋಟರ್ ಐಡಿ ಹೊಂದಿರುವವರ ಹೆಸರು ತೆಗೆಯುವ ಕೆಲಸವನ್ನು ಆಯೋಗ ಮಾಡಬೇಕು. ಈ ಬಗ್ಗೆ ಎಲ್ಲ ರೀತಿಯಲ್ಲಿ ತನಿಖೆ ನಡೆಯಲಿದೆ. ಭಾರತೀಯ ಚುನಾವಣೆ ಆಯೋಗ ಈ ಬಗ್ಗೆ ಕಾಳಜಿ ವಹಿಸಿದ್ದು, ಎಲ್ಲೆಲ್ಲಿ ದೂರುಗಳು ಬಂದಿವೆ ಅಲ್ಲಿ ತನಿಖೆ ನಡೆಸುತ್ತಿದೆ. ಅಲ್ಲದೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.