ಮತದಾರರ ಮಾಹಿತಿ ಸಂಗ್ರಹ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಡೆದ ಅಕ್ರಮ ತನಿಖೆ ಸಂಬಂಧ ನಿಯೋಜನೆಗೊಂಡಿದ್ದ 4 ತನಿಖಾ ತಂಡಗಳು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ವಿಸ್ತೃತ ವರದಿ ಸಲ್ಲಿಸಿವೆ. ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳ ಈ ಅಕ್ರಮದಲ್ಲಿ ಪಾಲುದಾರರಾಗಿರುವುದು ಪತ್ತೆಯಾಗಿದೆ. ಇದರಿಂದ ಮೂವರು ಅಧಿಕಾರಿಗಳ ತಲೆದಂಡವಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಶಿವಾಜಿನಗರ ವಿಧಾನಸಭಾ ಕ್ಷೇತ್ರದ ನೋಂದಣಾಧಿಕಾರಿ ಹಾಗೂ ಕಂದಾಯ ಅಧಿಕಾರಿ ಸುಹೇಲ್ ಅಹಮ್ಮದ್, ಚಿಕ್ಕಪೇಟೆ ವಿಧಾನಸಭಾ ಮತದಾರರ ನೋಂದಣಾಧಿಕಾರಿ ಹಾಗೂ ಉಪ ಕಂದಾಯ ಅಧಿಕಾರಿ ವಿ.ಬಿ.ಭೀಮಾ ಶಂಕರ್ ಹಾಗೂ ಮಹದೇವಪುರ ಕ್ಷೇತ್ರದ ನೋಂದಣಾಧಿಕಾರಿ ಮತ್ತು ಕಂದಾಯ ಅಧಿಕಾರಿಯಾದ ಕೆ.ಚಂದ್ರಶೇಖರ್‌ಅವರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ. ಅಕ್ರಮ ಸಾಬೀತಾದ ಬಳಿಕ ತೆರವಾದ ಕಂದಾಯ ಇಲಾಖೆ ಅಧಿಕಾರಿಗಳ ಸ್ಥಾನಕ್ಕೆ ಚುನಾವಣಾ ಕಾರ್ಯಚಟುವಟಿಕೆಗಳ ದೃಷ್ಟಿಯಿಂದ ಶ್ರೀನಿವಾಸ್, ಎಸ್.ಈಶ್ವರ್ ಹಾಗೂ ಎನ್.ಉಮಾ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.