ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನ ಇದೀಗ ಕೇಂದ್ರ ಬಿಜೆಪಿ ಹಾಗೂ ಆಮ್ ಆದ್ಮಿ ಪಾರ್ಟಿ ನಡುವಿನ ಹೋರಾಟಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಈ ಬಂಧನವನ್ನು ಸ್ವತಃ ಸಿಬಿಐ ಅಧಿಾಕಾರಿಗಳೇ ವಿರೋಧಿಸಿದ್ದಾರೆ. ಆದರೆ ರಾಜಕೀಯ ಒತ್ತಡದ ಕಾರಣ ಆಗಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ಭಾರಿ ಭದ್ರತೆಯೊಂದಿಗೆ ಸಿಬಿಐ ಅಧಿಕಾರಿಗಳು ಮನೀಶ್ ಸಿಸೋಡಿಯಾರನ್ನು ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ. ಇತ್ತ ಆಪ್ ಕಾರ್ಯಕರ್ತರು ದೇಶಾದ್ಯಂತ ಭಾರಿ ಪ್ರತಿಭಟನೆ ನಡೆಸಿದ್ದಾರೆ. ದೆಹಲಿ, ಪಂಜಾಬ್, ಬೆಂಗಳೂರು, ಭೋಪಾಲ್ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ ಹಮ್ಮಿಕೊಂಡಿದೆ. ಹಲೆವೆಡೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಆದರೆ ಪ್ರತಿಭಟನಾಕಾರರು ಬ್ಯಾರಿಕೇಡ್ ಜಿಗಿದು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ದೆಹಲಿಯ ಹಲವು ಭಾಗದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.