ಹಿಂದುತ್ವವನ್ನು ಪ್ರತಿಪಾದನೆ ಮಾಡುತ್ತಾ ಬರುತ್ತಿರುವ ಕೆ.ಎಸ್. ಈಶ್ವರಪ್ಪ ಅವರಿಗೆ ಈ ಹಿಂದೆಯೂ ಹಲವಾರು ಬಾರಿ ಬೆದರಿಕೆ ಕರೆಗಳು ಬಂದಿದ್ದು, ಇದೀಗ ನಿನ್ನೆ ಭಾನುವಾರ ರಾತ್ರಿ ಸುಮಾರು 12.30 ಗಂಟೆಯ ಸುಮಾರಿಗೆ, ನನಗೆ ಕಜಕಿಸ್ತಾನ ದೇಶದಿಂದ ಬೆದರಿಕೆ ಕರೆ ಬಂದಿದೆ ಎಂದು ದೂರಿದ್ದಾರೆ. ನಾನು ಮಲಗಿದ್ದ ವೇಳೆ ಮೊಬೈಲ್ ಸೈಲೆಂಟ್ ಮಾಡಿಟ್ಟಿದ್ದೆ. ಈ ವೇಳೆ ನನ್ನ ವಾಟ್ಸಪ್ಗೆ ಮಿಸ್ಡ್ ಕಾಲ್ ಬಂದಿದ್ದು, ಬೆಳಿಗ್ಗೆ ಎದ್ದು ಈ ಕರೆ ನೋಡಿದಾಗ ಇದು ಕಜಾಕಿಸ್ತಾನದ್ದೆಂದು ತಿಳಿದುಬಂದಿದೆ. ಕಜಕಿಸ್ತಾನದಿಂದ ಬಂದಿರುವ ಕರೆ ಎಂದರೆ, ಅದು ನನಗೆ ಬೆದರಿಕೆ ಒಡ್ಡಲೆಂದೇ ಬಂದಿದ್ದು, ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಎಸ್.ಪಿ.ಗೆ ಈಶ್ವರಪ್ಪ ದೂರು ನೀಡಿದ್ದಾರೆ. ದೂರಿನಲ್ಲಿ ತಮಗೆ ರಕ್ಷಣೆ ನೀಡುವ ಜೊತೆಗೆ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೇ ತಾವು ಹಿಂದುತ್ವದ ಪ್ರತಿಪಾದಕರಾಗಿದ್ದು, ಇಂತಹ ಬೆದರಿಕೆಗಳಿಗೆಲ್ಲ ಬಗ್ಗಲ್ಲ ಅಂತಾ ಮತ್ತೊಮ್ಮೆ ಸಂದೇಶ ರವಾನಿಸಿದ್ದಾರೆ. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಜಯೇಶ್ ಎಂಬ ಆರೋಪಿಯ ಡೈರಿಯಲ್ಲಿ ಈಶ್ವರಪ್ಪ ಅವರ ಹೆಸರು ಆತನ ಡೈರಿಯಲ್ಲಿ ಇದ್ದದ್ದು ಕಳೆದೊಂದು ತಿಂಗಳ ಹಿಂದೆ ಪತ್ತೆಯಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿ ಜಯೇಶ್ನನ್ನು ಬಂಧಿಸಿದ್ದ ವೇಳೆ ನನಗೂ ಕೂಡ ಆ ಆರೋಪಿಯಿಂದ ಬೆದರಿಕೆ ಇತ್ತೆಂದು ಎನ್.ಐ.ಎ. ಅಧಿಕಾರಿಗಳು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ಬೆದರಿಕೆ ಕರೆ ಬಂದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಶಿವಮೊಗ್ಗ ಎಸ್.ಪಿ. ದೂರು ಸ್ವೀಕರಿಸಿದ್ದು, ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದು, ತನಿಖೆ ನಡೆಸುವುದಾಗಿ ಹೇಳಿದ್ದಾರೆ.