ಕೆಎಸ್‌ಡಿಎಲ್ ಕೆಮಿಕಲ್ ಆಯಿಲ್ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡಲು ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಪ್ರಕರಣದಲ್ಲಿ ಶಾಸಕ ಕೆ. ಮಾಡಾಳು ವಿರೂಪಾಕ್ಷಪ್ಪರನ್ನು ಬಂಧಿಸಿ ವಿಚಾರಣೆ ನಡೆಸಲೇಬೇಕಿದೆ ಎಂದು ಲೋಕಾಯುಕ್ತ ಪೊಲೀಸರು ಹೈಕೋರ್ಟ್‌ನಲ್ಲಿ ಬಲವಾಗಿ ವಾದಿಸಿದ್ದಾರೆ. ಅಕ್ರಮದಲ್ಲಿ ಮಾಡಾಳು ವಿರೂಪಾಕ್ಷಪ್ಪ ಅವರ ಹೆಸರು ಪ್ರಸ್ತಾಪವಾಗಿದೆ. ವಿರೂಪಾಕ್ಷಪ್ಪ ಪ್ರತಿದಿನ ನೋಟ್ಸ್‌ಬರೆದುಕೊಂಡು ಬಂದು ಪೊಲೀಸರ ಮುಂದೆ ಹೇಳಿಕೆ ನೀಡುತ್ತಿದ್ದಾರೆ. ಆದ್ದರಿಂದ, ಅವರನ್ನು ಬಂಧಿಸಿ ವಿಚಾರಣೆ ನಡೆಸಿದರೆ ತನಿಖೆಗೆ ಅನುಕೂಲವಾಗಲಿದೆ ಎಂದು ಲೋಕಾಯುಕ್ತ ಪೊಲೀಸರ ಪರ ವಕೀಲರು ವಾದ ಮಂಡಿಸಿ, ‘ಇಂದಿನ ದಿನಗಳಲ್ಲಿ ಲಂಚವನ್ನು ನೇರವಾಗಿ ಪಡೆಯುವುದಿಲ್ಲ. ಬೇರೊಬ್ಬರ ಮೂಲಕ ಹಣ ಸ್ವೀಕರಿಸುತ್ತಾರೆ. ಇಲ್ಲೂ ಸಹ ಅದೇ ರೀತಿಯಾಗಿದ್ದು, ಪುತ್ರನ ಮೂಲಕ ಲಂಚವನ್ನು ಪಡೆದಿದ್ದಾರೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.’ವಿರೂಪಾಕ್ಷಪ್ಪ ಪರ ವಕೀಲರು, ಅರ್ಜಿದಾರರು ಪ್ರತಿದಿನವೂ ಲೋಕಾಯುಕ್ತ ಪೊಲೀಸರ ತನಿಖೆಗೆ ಹಾಜರಾಗಿದ್ದು, ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ತನಿಖೆಯೇ ಮುಕ್ತಾಯದ ಹಂತದಲ್ಲಿರುವಾಗ ಅವರನ್ನು ಬಂಧಿಸಿ ವಿಚಾರಣೆ ನಡೆಸುವ ಅಗತ್ಯವಿಲ್ಲ. ಆದ್ದರಿಂದ, ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕೆಂದು’ ಕೋರಿದರು.