ಮಾನನಷ್ಟ ಪ್ರಕರಣದಲ್ಲಿ ರಾಹುಲ್‌ಗೆ ಹಿನ್ನಡೆ – ಅವರ ರಾಜಕೀಯ ಭವಿಷ್ಯ ಏನಾಗಬಹುದು

ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ವಜಾಗೊಳಿಸಿ, 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಸೂರತ್ ನ್ಯಾಯಾಲಯ ಆದೇಶವನ್ನು ಶುಕ್ರವಾರ ಗುಜರಾತ್ ಹೈಕೋರ್ಟ್ ಎತ್ತಿ ಹಿಡಿದಿದೆ. ಅವರ ವಿರುದ್ಧ ಇನ್ನು 10 ಕ್ರಿಮಿನಲ್ ಕೇಸ್‌ಗಳು ಬಾಕಿ ಇವೆ ಎಂದು ಆದೇಶದ ವೇಳೆ ನ್ಯಾಯಮೂರ್ತಿ ಹೇಮಂತ್ ಪ್ರಚಕ್ ತಿಳಿಸಿದ್ದಾರೆ. ಅವರ ರಾಜಕೀಯ ಭವಿಷ್ಯ ಏನಾಗಬಹುದು ಎಂಬುದು ಎಲ್ಲರ ಕುತೂಹಲವಾಗಿದೆ. ಕೆಳ ಹಂತದ ಆದೇಶವನ್ನು ಗುಜರಾತ್ ಹೈಕೋರ್ಟ್ ಎತ್ತಿ ಹಿಡಿದಿರುವ ಹಿನ್ನಲೆ ಸದ್ಯ ರಾಹುಲ್ ಗಾಂಧಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶಗಳಿದೆ. ಮೊದಲು ಅವರು ಜಾಮೀನು ಅರ್ಜಿ ಸಲ್ಲಿಸಬೇಕಾಗುತ್ತದೆ. ಜಾಮೀನು ಅರ್ಜಿ ಪುರಸ್ಕರಿಸಿ ಪ್ರಕರಣದ ವಿಚಾರಣೆ ನಡೆಸಿದರೆ ರಾಹುಲ್ ಗಾಂಧಿಗೆ ತಾತ್ಕಾಲಿಕ ರಿಲೀಫ್ ಸಿಗಲಿದೆ. ಒಂದು ವೇಳೆ ಸುಪ್ರೀಂಕೋರ್ಟ್ ಜಾಮೀನು ನೀಡಲು ನಿರಾಕರಿಸಿದರೆ ಅವರು ಜೈಲಿಗೆ ಹೋಗಬೇಕಾದ ಅನಿವಾರ್ಯ ಸೃಷ್ಟಿಯಾಗಲಿದೆ.ಪ್ರಕರಣದ ಸುದೀರ್ಘ ವಿಚಾರಣೆ ಬಳಿಕ ರಾಹುಲ್ ಗಾಂಧಿ ಅವರನ್ನು ದೋಷಮುಕ್ತಗೊಳಿಸಿದರೆ ಇಡಿ ಪ್ರಕರಣದಿಂದ ಅವರು ಪಾರಾಗಲಿದ್ದಾರೆ. ಒಂದು ವೇಳೆ ಅವರು ತಪ್ಪಿತಸ್ಥರು ಎಂದು ಸುಪ್ರೀಂಕೋರ್ಟ್ ಕೂಡಾ ಆದೇಶ ನೀಡಿದರೆ ಅವರ ರಾಜಕೀಯ ಜೀವನ ಮಸುಕಾಗಲಿದೆ. ಸೂರತ್ ಮ್ಯಾಜಿಸ್ಟ್ರೇಟ್ ಕೋರ್ಟ್ 2 ವರ್ಷದ ಶಿಕ್ಷೆ ನೀಡಿರುವ ಹಿನ್ನಲೆ 2 ವರ್ಷದ ಸೆರೆವಾಸದ ಜೊತೆಗೆ ಅವರು ಜನಪ್ರತಿನಿಧಿಗಳ ಕಾನೂನಿನ ಪ್ರಕಾರ 6 ವರ್ಷ ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗಲಿದ್ದಾರೆ. ಒಟ್ಟು 8 ವರ್ಷಗಳ ರಾಜಕೀಯ ಬದುಕು ನಾಶವಾಗಲಿದೆ. ಅವರ ಪ್ರಧಾನಿಯಾಗಬೇಕು ಎಂಬ ಕನಸಿಗೆ ದೊಡ್ಡ ಹಿನ್ನಡೆಯಾಗಲಿದೆ.

Leave a Reply

Your email address will not be published. Required fields are marked *