ಕಾವೇರಿ ನೀರು ಬಿಡುವ ವಿಚಾರ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಈ ವರ್ಷ ಬರಗಾಲ ಹಿನ್ನೆಲೆ ನಮ್ಮ ಜಲಾಶಯಗಳೆಲ್ಲ ಖಾಲಿ ಆಗಿವೆ. ಕೃಷಿಗೆ ಬಿಡಿ, ಬೆಂಗಳೂರಿಗೆ ಕುಡಿಯುವ ನೀರಿಗೂ ಸಮಸ್ಯೆ ಆಗಿದೆ. ಇಂಥ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಬೆಳೆ ಬೆಳೆಯುವುದಕ್ಕೆ ನೀರು ಬಿಡಿ ಎಂದರೆ ಹೇಗೆ? ಈ ವಿಚಾರವಾಗಿ ಸರ್ಕಾರ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಬೇಕು ಎಂದು ಆಗ್ರಹಿಸಿದರು. ರಾಜ್ಯ ಸರ್ಕಾರ ಮೊದಲು ನೀರು ಬಿಡುವುದನ್ನು ನಿಲ್ಲಿಸಲಿ. ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ತಿಳಿಸಿ ಮನವರಿಕೆ ಮಾಡಿಕೊಡಲಿ. ಅಗತ್ಯ ಬಿದ್ದರೆ ಪ್ರಾಧಿಕಾರದ ನಿಯೋಗ ರಾಜ್ಯಕ್ಕೆ ಬಂದು ವಾಸ್ತವಿಕ ಸ್ಥಿತಿ ನೋಡಿ ತೀರ್ಮಾನ ಕೈಗೊಳ್ಳಲಿ. ಯಾವುದೇ ಕಾರಣಕ್ಕೂ ನಾವು ನೀರು ಬಿಡುವ ಸ್ಥಿತಿಯಲ್ಲಿ ಇಲ್ಲ ಅನ್ನೋದನ್ನು ಮನದಟ್ಟು ಮಾಡುವ ಕೆಲಸವನ್ನು ಸರ್ಕಾರ ಮಾಡಲಿ ಎಂದು ಆಗ್ರಹಿಸಿದರು.