ವಿಶ್ವ ಯೋಗ ದಿನಾಚರಣೆ ಹಿನ್ನೆಯಲ್ಲಿ ಖಾಸಗಿ ಹೋಟೆಲಿನಿಂದ ಬೆಳಗ್ಗೆ 6:30ರ ವೇಳೆಗೆ ಅರಮನೆ ಮುಂಭಾಗಕ್ಕೆ ಮೋದಿ ಆಗಮಿಸಿದರು. ಚುಟುಕಾಗಿ ನಡೆದ ಸಭಾ ಕಾರ್ಯಕ್ರಮ ಆರಂಭದಲ್ಲಿ ಆಯುಷ್ಸಚಿವ ಸರ್ಬಾನಂದ ಸೊನೊವಾಲ್, ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿದರು. ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಯೋಗದಿಂದ ಆರೋಗ್ಯ ವೃದ್ಧಿಯಾಗುತ್ತದೆ. ಕೇವಲ ವ್ಯಕ್ತಿಗೆ ಮಾತ್ರ ಯೋಗ ಅಲ್ಲ. ಇದು ಮನುಕುಲಕ್ಕೆ ಯೋಗ ಮುಖ್ಯ. ಯೋಗದಿಂದ ವ್ಯಕ್ತಿಗೆ ಮಾತ್ರ ಶಾಂತಿ ಸಿಗುವುದಿಲ್ಲ. ಇಡಿ ವಿಶ್ವಕ್ಕೆ ಶಾಂತಿ ಸಿಗುತ್ತದೆ ಎಂದು ಕೊಂಡಾಡಿದರು. 75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ಆಚರಿಸಲಾಗುತ್ತಿರುವ ಅಜಾದಿ ಕೀ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ವಿಶ್ವದ 75 ಭಾಗಗಳಲ್ಲಿ ಯೋಗ ದಿನಾಚರಣೆ ನಡೆಯುತ್ತಿದೆ. ಈ ಮೂಲಕ ಯೋಗ ದೇಶ ದೇಶಗಳನ್ನು ಒಂದಾಗಿಸುತ್ತದೆ. ವಿಶ್ವದ ವಿವಿಧ ಭಾಗದಲ್ಲಿ ಯೋಗ ದಿನಾಚರಣೆ ನಡೆಸುತ್ತಿರುವ ಎಲ್ಲರಿಗೆ ಸಮಸ್ತ ಭಾರತೀಯರ ಪರವಾಗಿ ಧನ್ಯವಾದ ಹೇಳುತ್ತೇನೆ. ಭಾಷಣ ಮುಗಿದ ಬಳಿಕ ವೇದಿಕೆಯಿಂದ ಕೆಳಗೆ ಇಳಿದ ಮೋದಿ ಯೋಗಾಸನ ಮಾಡಲು ನಿಗದಿಯಾದ ಸ್ಥಳಕ್ಕೆ ತೆರಳಿದರು. 7:08ಕ್ಕೆ ಆರಂಭಗೊಂಡ ಯೋಗ ಕಾರ್ಯಕ್ರಮ ವಿದ್ಯಾರ್ಥಿಗಳು, ಶಿಕ್ಷಕರು, ಕಾರ್ಮಿಕರು, ಸರ್ಕಾರಿ ನೌಕರರ ಜೊತೆ ಅರಮನೆ ನಗರಿಯಲ್ಲಿ 15 ಸಾವಿರ ಯೋಗ ಪಟುಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಯೋಗಾಸನ ಮಾಡಿದ್ದಾರೆ. ಶಾಂತಿ ಮಂತ್ರದೊಂದಿಗೆ 7:52ಕ್ಕೆ ಮುಕ್ತಾಯಗೊಂಡಿತು.