2022ರ ಫೆಬ್ರವರಿ 24ರಂದು ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಮಾಡುತ್ತಿದ್ದಂತೆ ಜಗತ್ತೇ ಒಂದು ಕ್ಷಣ ಸ್ತಬ್ಧವಾಗಿತ್ತು. ಯಾವ ಕ್ಷಣದಲ್ಲಿ ಇದು ಮತ್ತೊಂದು ಮಹಾಯುದ್ಧವಾಗಿ, ಇಡೀ ಜಗತ್ತನ್ನೇ ಬಲಿ ಪಡೆಯುತ್ತದೋ? ಎಂಬ ಚಿಂತೆ ಶುರುವಾಗಿತ್ತು. ಮತ್ತೊಂದು ಕಡೆ ರಷ್ಯಾ ವಿರುದ್ಧ ಆರ್ಥಿಕ ಯುದ್ಧ ಸಾರಿದ್ದ ಅಮೆರಿಕ ಮತ್ತು ಅದರ ಯುರೋಪಿನ ಮಿತ್ರ ರಾಷ್ಟ್ರಗಳು, ಯುರೋಪ್ಗೆ ರಷ್ಯಾದಿಂದ ಬರುತ್ತಿದ್ದ ತೈಲವನ್ನು ತಕ್ಷಣ ನಿಲ್ಲಿಸಿದ್ದವು. ಆದರೆ ಇದೇ ನಿರ್ಧಾರ ಭಾರತಕ್ಕೆ ವರವಾಗಿ ಪರಿಣಮಿಸಿದೆ.ಇದಕ್ಕೆ ಹೇಳುವುದು ಜಾಗತಿಕವಾಗಿ ಯಾವುದೇ ರಾಷ್ಟ್ರದ ದ್ವೇಷ ಕಟ್ಟಿಕೊಳ್ಳದಿದ್ದರೆ, ಆರ್ಥಿಕ ಅಭಿವೃದ್ಧಿ ಸುಲಭ ಅಂತಾ. ಭಾರತದ ಜಾಣ ನಡೆ ಇಲ್ಲಿ ಮತ್ತೊಮ್ಮೆ ಲಾಭ ತಂದುಕೊಟ್ಟಿದೆ. ಅತ್ತ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳ ಜೊತೆ ಸಂಬಂಧವನ್ನು ವೃದ್ಧಿಸಿ, ಇತ್ತ ರಷ್ಯಾ ಜೊತೆಗಿನ ಸ್ನೇಹವನ್ನೂ ಕಾಪಾಡಿಕೊಂಡು ಭಾರತ ಆರ್ಥಿಕವಾಗಿ ಲಾಭ ಮಾಡಿಕೊಂಡಿದೆ. ಆದರೆ ಭಾರತದಲ್ಲಿ ಮಾತ್ರ ತೈಲದ ದರ ಕಡಿಮೆ ಆಗುತ್ತಿಲ್ಲವೇಕೆ? ಎಂಬ ಪ್ರಶ್ನೆಗೆ ಸೂಕ್ತ ಉತ್ತರ ಸಿಗುತ್ತಿಲ್ಲ.