ರಸ್ತೆಗುಂಡಿಗೆ ಮಹಿಳೆ ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮಲ್ಲೇಶ್ವರಂ ಟ್ರಾಫಿಕ್ ಪೊಲೀಸರು ನೋಟಿಸ್ ನೀಡಿದ್ದಾರೆ. ಕಳೆದ 10 ದಿನಗಳ ಹಿಂದೆ ಸುಜಾತ ಟಾಕೀಸ್ ಬಳಿ ಗುಂಡಿ ತಪ್ಪಿಸಲು ಹೋಗಿ ಬಸ್ ಹರಿದು ಮಹಿಳೆ ಸಾವನ್ನಪ್ಪಿದ್ದರು. ಮಹಿಳೆ ಸಾವನ್ನಪ್ಪಿದ್ದ ಬಳಿಕ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಎಫ್‍ಐಆರ್ ಮಾಡಿಕೊಂಡಿದ್ದರು. ಅಲ್ಲದೆ ಕೆಎಸ್ ಆರ್ ಟಿಸಿ ಬಸ್ ಚಾಲಕನ ಮೇಲೂ ಕೇಸ್ ಬುಕ್ ಮಾಡಿಕೊಂಡಿದ್ದರು. ಈಗ ಬಿಬಿಎಂಪಿಗೆ ನೋಟಿಸ್ ನೀಡಿ ರಸ್ತೆ ಡಾಂಬರೀಕರಣ ಟೆಂಡರ್ ಯಾರಿಗೆ ನೀಡಿದ್ರಿ..?, ರಸ್ತೆ ಡಾಂಬರೀಕರಣ ನಿರ್ವಹಣೆ ಹೊಣೆ ಹೊತ್ತಿದ್ದ ಎಂಜಿನಿಯರ್ ಯಾರು?, ಅಪಘಾತ ಆದ ಜಾಗದಲ್ಲಿ ಯಾವಾಗ ಡಾಂಬರೀಕರಣ ಆಗಿದ್ದು? ಇದೆಲ್ಲದರ ಬಗ್ಗೆ ಮಾಹಿತಿ ನೀಡುವಂತೆ ಬಿಬಿಎಂಪಿ ಯೋಜನಾ ವಿಭಾಗದ ಎಂಜಿನಿಯರ್ ಗೆ ನೋಟಿಸ್ ನೀಡಲಾಗಿದೆ. ಇನ್ನೂ ಮೃತರ ಕುಟುಂಬಕ್ಕೆ ಬಿಬಿಎಂಪಿ ಪರಿಹಾರ ನೀಡಿಲ್ಲ. ರಸ್ತೆಗುಂಡಿಯಿಂದ ಅಪಘಾತ ಆಗಿದೆಯಾ ಅಥವಾ ಕೆಎಸ್ ಆರ್ ಟಿಸಿ ಯಿಂದ ಅಪಘಾತ ಆಗಿದೆಯಾ ಅಂತಾ ಬಿಬಿಎಂಪಿ ಮೀನಾಮೇಷ ಎಣಿಸುತ್ತಿದೆ. ಹೀಗಾಗಿ ಬಿಬಿಎಂಪಿ ರಸ್ತೆಗುಂಡಿಗೆ ಬಲಿಯಾಗ್ತಾ ಇರುವವರ ಸಂಖ್ಯೆ ಹೆಚ್ಚಾಗ್ತಿರೋ ಹಿನ್ನೆಲೆ ಮತ್ತೆ ಇಂತಹ ಪ್ರಕರಣ ಮರುಕಳಿಸದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.